Monday 8 March 2021

The national poet G. S. A Brief Introduction by Shivardrappa

  MahitiVedike Com       Monday 8 March 2021
 
ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪ ಅವರ ಸಂಕ್ಷಿಪ್ತ ಪರಿಚಯ

   

   ಫೆಬ್ರವರಿ 7, 1926ರಂದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಹುಟ್ಟಿದ ಜಿ. ಎಸ್. ಶಿವರುದ್ರಪ್ಪ (ಜೀಯೆಸ್ಸೆಸ್) ಈ ನಾಡಿನಲ್ಲಿ ವ್ಯಾಪಕವಾಗಿ ಸಂಚರಿಸಿದ್ದವರು. ಪ್ರವಾಸ ಪ್ರೀತಿಯ ಜೀಯೆಸ್ಸೆಸ್ ಈ ಸುತ್ತುವಿಕೆಯಿಂದ ಬಹುಶ್ರುತತೆಯನ್ನು, ಸಮಚಿತ್ತವನ್ನು, ಜನಸಂಪರ್ಕವನ್ನು ಪಡೆದಿದ್ದರು.

    ಸೃಜನ, ವಿಮರ್ಶೆ, ಮೀಮಾಂಸೆ, ಅಧ್ಯಯನ, ಅಧ್ಯಾಪನ, ಆಡಳಿತ, ಸಂಘಟನೆ – ಈ ಮುಂತಾದ ಸಾಂಸ್ಕೃತಿಕ ನೆಲೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಕನ್ನಡ ಸಂಸ್ಕೃತಿಯ ಚಲನಶೀಲತೆಗೆ ತಮ್ಮ ಕೊಡುಗೆ ನೀಡುತ್ತ ಬಂದ ಮುಖ್ಯರಲ್ಲಿ ಒಬ್ಬರಾಗಿದ್ದಾರೆ. ಡಾ. ಜಿ. ಎಸ್. ಶಿವರುದ್ರಪ್ಪನವರು ಗೋವಿಂದ ಪೈ, ಕುವೆಂಪು ನಂತರ ಮೂರನೆಯ ರಾಷ್ಟ್ರಕವಿಯಾಗಿ ನಮ್ಮ ಕನ್ನಡಿಗರ ಹೆಮ್ಮೆಯಾಗಿದ್ದಾರೆ.

   ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆಯಾಗಿ, ದೂರ ದೂರದ ಹಳ್ಳಿಗಾಡುಗಳಲ್ಲಿ ಓದಿನ ಸೌಲಭ್ಯಗಳಿಗಾಗಿ ನಿಧಾನವಾಗಿ ತೆರೆದುಕೊಳ್ಳುತ್ತಿದ್ದ ಜನಸಮುದಾಯದಿಂದ ಬಂದು ಶ್ರಮ, ನಿಷ್ಠೆ, ಹಾಗೂ ಪ್ರತಿಭೆಗಳಿಂದ ರಂಗದಲ್ಲಿ ಮುಖ್ಯರಾಗತೊಡಗಿದ್ದ, ಹಾಗೆ ತೊಡಗಿ ಯಶಸ್ಸು ಪಡೆದ ಮೊದಲ ತಲೆಮಾರಿಗೆ ಜೀಯೆಸ್ಸೆಸ್ ಸೇರುತ್ತಾರೆ. ಕನ್ನಡ ನವೋದಯದ ಮುಂದಾಳುಗಳು ರೂಪಿಸಿದ ಹಾದಿಯಲ್ಲಿ ನಡೆದು ಸಮರ್ಥ ಉತ್ತರಾಧಿಕಾರಿಗಳು ಎಂದು ಸಾಬೀತು ಮಾಡಿದ್ದಾರೆ.

   ಶಿಕ್ಷಕ ತಂದೆಯೊಡನೆ ಸುತ್ತುತ್ತ ಊರೂರುಗಳಲ್ಲಿ ಶಿಕ್ಷಣ ಪಡೆದು ಮೈಸೂರು ಸೇರಿ ವೆಂಕಣ್ಣಯ್ಯ, ಕುವೆಂಪು ಅವರ ಒತ್ತಾಸೆಯಲ್ಲಿ ಬಿ.ಎ (ಆನರ್ಸ್), ಎಂ.ಎ ಹಾಗೂ ಪಿ.ಎಚ್.ಡಿ ಗಳನ್ನು ಪಡೆದರು. ಮಹಾರಾಜ ಕಾಲೇಜು ಆಗ ಟಂಕಸಾಲೆ. ಅಲ್ಲಿ ಪ್ರಮಾಣೀಕರಣಗೊಂಡರೆ ಮಾತ್ರ ಸಾಹಿತ್ಯಕ ವ್ಯಕ್ತಿತ್ವಕ್ಕೆ ಚಲಾವಣೆ ಸಿಗುವಂತೆ ಇದ್ದ ಕಾಲ. ವಿಶ್ವವಿದ್ಯಾಲಯದ ಹೊರಗಿದ್ದವರೂ ಒಂದಲ್ಲ ಒಂದು ಬಗೆಯಲ್ಲಿ ಈ ಟಂಕಸಾಲೆಯ ವ್ಯಾಪ್ತಿಯ ಒಳಗಾಗಿಯೇ ಇದ್ದರೆಂಬುದಕ್ಕೆ ಪ್ರಬುದ್ಧ ಕರ್ನಾಟಕ ಹಾಗೂ ಮಹಾರಾಜ ಕಾಲೇಜು ಕರ್ನಾಟಕ ಸಂಘ ಪ್ರಕಟಿಸಿದ ಗ್ರಂಥಗಳ ಪುಟಗಳು ಸಾಕ್ಷಿಯಾಗಿವೆ. ಜೀಯೇಸ್ಸೆಸ್ ಅಲ್ಲಿ ಕವಿಯಾಗುವ ಹಂಬಲಕ್ಕೆ ಪುಷ್ಟಿ ಪಡೆದರು. ಮಾಸ್ತಿಯವರು ‘ಜೀವನ’ದಲ್ಲಿ ಈ ಕವಿಯನ್ನು ಮೊದಲು ಅನಾವರಣಗೊಳಿಸಿದರಾದರೂ ಜೀಯೆಸ್ಸೆಸ್ ಹಸಿರು ಬಾವುಟ ಕಂಡದ್ದು ಕುವೆಂಪು ಅವರಲ್ಲಿ. ಈ ಮಹಾರಾಜ ಕಾಲೇಜು ಇವರೊಳಗಿನ ವಿಮರ್ಶಕ ಮೀಮಾಂಸಕರನ್ನೂ ಬೆಳೆಸಿತು.

   ಜೀಯೆಸ್ಸೆಸ್ ಮೈಸೂರು ವಿಶ್ವವಿದ್ಯಾಲಯದ ವಿವಿಧ ಕಾಲೇಜುಗಳಲ್ಲಿ (ದಾವಣಗೆರೆ, ಶಿವಮೊಗ್ಗೆ, ಮೈಸೂರು) ಅಧ್ಯಾಪಕರಾಗಿ ವೃತ್ತಿಜೀವನವನ್ನು ಆರಂಭಿಸಿದರು. ಹೈದರಾಬಾದ್ ಉಸ್ಮಾನಿಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯರಾಗಿ ಕೆಲಸಮಾಡಿ, ಮರಳಿ ಮಹಾರಾಜಾ ಕಾಲೇಜಿಗೆ ಬಂದು, ಅನಂತರ (1966) ಬೆಂಗಳೂರು ವಿಶ್ವವಿದ್ಯಾಲಯ ಸೇರಿ, 1970ರಿಂದ ಕನ್ನಡ ಅಧ್ಯಯನ ಕೇಂದ್ರದ ಮುಖ್ಯರಾದರು. ಇಲ್ಲಿ ಎರಡು ದಶಕಗಳ ಕಾಲ ಕಾವ್ಯ, ಕಾವ್ಯಮೀಮಾಂಸೆಗಳ ಪಾಠ ಹೇಳಿದ್ದಾರೆ. ಕನ್ನಡದ ಅತಿ ಪ್ರಭಾವಶಾಲಿ ಅಧ್ಯಾಪಕರ ಪರಂಪರೆಗೆ ಜೀಯೆಸ್ಸೆಸ್ ಸೇರುತ್ತಾರೆ. ಪ್ರಾಚೀನ ಹಾಗೂ ಆಧುನಿಕ ಕನ್ನಡ ಕಾವ್ಯ, ಇಂಗ್ಲಿಷ್ ರೋಮಾಂಟಿಕ್ ಕಾವ್ಯ, ಐರೋಪ್ಯ ನವ್ಯಕಾವ್ಯ, ಪಾಶ್ಚಾತ್ಯ ಮಹಾಕಾವ್ಯ ಹಾಗೂ ತೌಲನಿಕ ಕಾವ್ಯ ಮೀಮಾಂಸೆ – ಇವು ಅವರು ಪಾಠ ಹೇಳಿದ ಮುಖ್ಯ ವಲಯಗಳು. ಎಲ್ಲ ಕಾಲದ, ಎಲ್ಲ ದೇಶದ ಕವಿಗಳನ್ನು ಕನ್ನಡದ ಸಂವೇದನೆಯ ಮೂಲಕವೇ ಗ್ರಹಿಸಬಯಸುವ, ಪರೋಕ್ಷವಾಗಿ ಒಂದು ಬಗೆಯ ಶುದ್ಧ ಕಾವ್ಯವನ್ನು ಹುಡುಕುವ ವಿಧಾನವನ್ನು ಬಳಸಿದರು. ಅವರ ಪಾಠಗಳು ಪೂರ್ವಸಿದ್ಧತೆ, ವಿವರಗಳ ಮಂಡನೆ, ಚಿಂತನಶೀಲತೆ, ಸಾಮಯಿಕ ಒಳನೋಟಗಳನ್ನು ಒಳಗೊಂಡಿರುವುದರ ಜೊತೆಗೆ ಹೊಸದನ್ನು ಅಳವಡಿಸಿಕೊಳ್ಳುವ, ಹೊಸದಾದುದಕ್ಕೆ ಪ್ರತಿಕ್ರಯಿಸುವ ಆಸಕ್ತಿಯಿಂದ ಕೂಡಿರುತ್ತಿದ್ದವು. ಅವರ ಪಾಠಗಳು ಅವರ ವಿದ್ಯಾರ್ಥಿಗಳನ್ನು ಚಿಂತನೆಗೆ ಹಚ್ಚಿ ಮೊಳೆತು ಬೆಳೆದಿವೆಯಾಗಿ, ಜೀಯೆಸ್ಸೆಸ್ ಪರೋಕ್ಷವಾಗಿ ತರಗತಿಯ ಹೊರಗೂ ಮೇಷ್ಟರಾಗಿದ್ದಾರೆ. ಅವರ ಹಲವಾರು ಶಿಷ್ಯರು ಕನ್ನಡ ವಿಮರ್ಶೆ ಮತ್ತು ಸಾಹಿತ್ಯಾಧ್ಯಯನದ ಕ್ಷೇತ್ರದ ಕೃಷಿಯಲ್ಲಿ ತೊಡಗಿದ್ದಾರೆ.
       
   ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ನಿರ್ದೇಶಕರಾಗಿ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಸಾಹಿತ್ಯ ಸಂಬಂಧದ ಚಟುವಟಿಕೆಗಳನ್ನು ಸಂಯೋಜಿಸಿ, ಸಂಘಟಿಸಿ, ನಿರ್ವಹಿಸಿ ಜೀಯೆಸ್ಸೆಸ್ ಹೆಸರಾಗಿದ್ದಾರೆ. ಕನ್ನಡ ವಿಮರ್ಶೆಯ ಬೆಳವಣಿಗೆಗೆ ಅವರು ಹಾಕಿಕೊಂಡ ಹಲವು ಯೋಜನೆಗಳನ್ನು ಕಾರ್ಯಗತ ಮಾಡಿದ್ದಾರೆ. ‘ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ’ಯ ಸಂಪುಟಗಳು ಮತ್ತು ‘ಸಾಹಿತ್ಯ ವಾರ್ಷಿಕ’ದ ಯೋಜನೆಗಳು ಅನನ್ಯವಾದವು. ಸಾಂಸ್ಥಿಕ ಪ್ರಯತ್ನದ ಸಾಹಿತ್ಯ ಚರಿತ್ರೆಯ ಯೋಜನೆಯಲ್ಲಿ ವಿವಿಧ ಚಿಂತನಾಕ್ರಮಗಳ ಮೇಳವನ್ನು ‘ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ’ಯು ಸಾಧಿಸಿದರೆ, ‘ಸಾಹಿತ್ಯ ವಾರ್ಷಿಕ’ ದಾಖಲೆಯ ಜೊತೆಗೆ ವಿಮರ್ಶೆಯ ಬೆಳವಣಿಗೆಯ ದಿಕ್ಕನ್ನು ಕೂಡ ಸಾಧಿಸಲು ಸಮರ್ಥವಾಗಿದೆ. ಇಂಥ ಪ್ರಯತ್ನಗಳನ್ನು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿಯೂ ಜೀಯೆಸ್ಸೆಸ್ ಮುಂದುವರೆಸಿ ಯಶಸ್ಸು ಸಾಧಿಸಿದ್ದರು.

   ಜೀಯೆಸ್ಸೆಸ್ ಅವರು ಕನ್ನಡ ಸಾಹಿತ್ಯ ಪಂಡಿತರಿಗೆ, ಸಾಹಿತ್ಯ ಚಿಂತಕರಿಗೆ, ಸಾಹಿತ್ಯ ಪ್ರಿಯರಿಗೆ ಎಷ್ಟು ಪ್ರಿಯರೋ, ಜನಸಾಮಾನ್ಯರಿಗೆ ಕೂಡ ಬಲುಪ್ರಿಯರು. ಅವರ ಭಾವಗೀತೆಗಳು ಹಲವಾರು ಪ್ರಮುಖ ಹಾಡುಗಾರರ, ಜನಸಾಮಾನ್ಯರ ಧ್ವನಿಗಳಲ್ಲಿ ಹಲವಾರು ದಶಕಗಳಿಂದ ನಲಿಯುತ್ತ ಸಾಗಿದೆ. ‘ಎದೆ ತುಂಬಿ ಹಾಡಿದೆನು ಅಂದು ನಾನು’ ಹಾಡನ್ನು ಅನುಭಾವಿಸದ ಕನ್ನಡಿಗನೇ ಇಲ್ಲ. ಎಲ್ಲ ಮಾದರಿಯ ಕವಿತೆಗಳಲ್ಲಿ, ಹಾಡುಗಳಲ್ಲಿ ಅದು ನಿರಂತರವಾಗಿ ಜನರ ನಾಲಿಗೆಯಲ್ಲಿ, ಜನಮಾನಸದಲ್ಲಿ ಬೆಳಗುತ್ತಿದೆ.
logoblog

Thanks for reading The national poet G. S. A Brief Introduction by Shivardrappa

Previous
« Prev Post

No comments:

Post a Comment