ಸಿಬಿಎಸ್ಇ 10, 12ನೇ ತರಗತಿ ವಿದ್ಯಾರ್ಥಿಗಳಿಗೆ ತಮ್ಮ ಅಂಕಗಳನ್ನು ಹೆಚ್ಚಿಸಿಕೊಳ್ಳಲು ಇನ್ನೊಂದು ಅವಕಾಶ
ಹೊಸದಿಲ್ಲಿ,ಮಾ.21: ಸಿಬಿಎಸ್‌ಇ ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಹೆಚ್ಚಿಸಿಕೊಳ್ಳಲು ಇನ್ನೊಂದು ಅವಕಾಶವನ್ನು ಪಡೆಯಲಿದ್ದಾರೆ. ಹಿಂದಿನ ನಿಯಮಗಳಂತೆ ಬೋರ್ಡ್ ಪರೀಕ್ಷೆಯಲ್ಲಿ ತನ್ನ ಸಾಧನೆಯನ್ನು ಉತ್ತಮಗೊಳಿಸಿಕೊಳ್ಳಲು ವಿದ್ಯಾರ್ಥಿ ಬಯಸಿದ್ದರೆ ಆತ/ಆಕೆ ಪೂರ್ಣ ಒಂದು ವರ್ಷ ಕಾಯಬೇಕಿತ್ತು ಮತ್ತು ಮುಂದಿನ ಬ್ಯಾಚ್ನೊಂದಿಗೆ ಪರೀಕ್ಷೆಗೆ ಹಾಜರಾಗಬೇಕಿತ್ತು.
ಇದೀಗ ಸಿಬಿಎಸ್‌ಇ ನೂತನ ಶಿಕ್ಷಣ ನೀತಿಯ ಭಾಗವಾಗಿ ವಿದ್ಯಾರ್ಥಿಗಳಿಗೆ ಅದೇ ಶೈಕ್ಷಣಿಕ ವರ್ಷದಲ್ಲಿ ಪರೀಕ್ಷೆಗೆ ಹಾಜರಾಗುವ ಅವಕಾಶವನ್ನು ಕಲ್ಪಿಸಿದೆ.
ನೂತನ ನಿಯಮದಂತೆ ವಿದ್ಯಾರ್ಥಿಗಳು ಯಾವುದೇ ಒಂದು ವಿಷಯದಲ್ಲಿ ತನ್ನ ಅಂಕಗಳನ್ನು ಹೆಚ್ಚಿಸಿಕೊಳ್ಳಲು ಬಯಸಿದರೆ ಮುಖ್ಯ ಪರೀಕ್ಷೆಯ ಬೆನ್ನಲ್ಲೇ ನಡೆಯುವ ಕಂಪಾರ್ಟ್ಮೆಂಟ್ ಪರೀಕ್ಷೆಗೆ ಹಾಜರಾಗಬಹುದಾಗಿದೆ.
ಈ ಎರಡೂ ಪರೀಕ್ಷೆಗಳಲ್ಲಿ ವಿದ್ಯಾರ್ಥಿ ಗಳಿಸಿದ ಹೆಚ್ಚಿನ ಅಂಕಗಳನ್ನು ಪರಿಣಾಮ ಘೋಷಣೆಗೆ ಪರಿಗಣಿಸಲಾಗುತ್ತದೆ. ತಮ್ಮ ಸಾಧನೆಯನ್ನು ಉತ್ತಮಗೊಳಿಸಿಕೊಳ್ಳುವ ವಿದ್ಯಾರ್ಥಿಗಳಿಗೆ ಸಂಯುಕ್ತ ಅಂಕಪಟ್ಟಿಯನ್ನು ವಿತರಿಸಲಾಗುವುದು ಎಂದು ಸಿಬಿಎಸ್‌ಇ ತಿಳಿಸಿದೆ.
ವಿದ್ಯಾರ್ಥಿ ಎರಡಕ್ಕಿಂತ ಹೆಚ್ಚು ವಿಷಯಗಳಲ್ಲಿ ತನ್ನ ಅಂಕಗಳನ್ನು ಹೆಚ್ಚಿಸಿಕೊಳ್ಳಲು ಬಯಸಿದ್ದರೆ ಆತ/ಆಕೆ ಪೂರ್ಣ ಒಂದು ವರ್ಷದವರೆಗೆ ಕಾಯಬೇಕಾಗುತ್ತದೆ ಮತ್ತು ಮುಂದಿನ ಬ್ಯಾಚ್ನೊಂದಿಗೆ ಪರೀಕ್ಷೆಗಳಿಗೆ ಹಾಜರಾಗಬೇಕಾಗುತ್ತದೆ. ನೂತನ ನಿಯಮಗಳು ಮೇ 4ರಿಂದ ಆರಂಭಗೊಳ್ಳುವ 2021ನೇ ಸಾಲಿನ ಸಿಬಿಎಸ್‌ಇ ಪರೀಕ್ಷೆಗಳೊಂದಿಗೆ ಜಾರಿಗೆ ಬರಲಿವೆ.
No comments:
Post a Comment