Wednesday 17 March 2021

About the freedom struggle

  MahitiVedike Com       Wednesday 17 March 2021

          ಸ್ವಾತಂತ್ರ್ಯ ಹೋರಾಟ


ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯ ಸ್ಥಾಪನೆಯನ್ನು ವಿರೋಧಿಸಿದ ಸನ್ನಿವೇಶಗಳು ಹಲವು. ಅನೇಕ ರಾಜಪ್ರಭುತ್ವಗಳು ಬ್ರಿಟಿಷರ ವಿರುದ್ಧ ಹೋರಾಡಿದ್ದು ಅವರ ಸ್ವಹಿತಾಸಕ್ತಿಗಾಗಿತ್ತು.

1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಹಲವಾರು ಬದಲಾವಣೆಗಳು ಹಾಗೂ ಪರಿಣಾಮಕಾರಿ ಸುಧಾರಣೆಗಳು ಕಂಡು ಬಂದವು. ಸಾರಿಗೆ ಮತ್ತು ಸಂಪರ್ಕ, ಪತ್ರಿಕೋದ್ಯಮ, ಸಂಘಗಳ ಸ್ಥಾಪನೆ, ಆಡಳಿತ ಸುಧಾರಣೆಗಳಲ್ಲಿ ಬದಲಾವಣೆಗಳು ಕಂಡುಬಂದವು.

 ಜನರು ಅಲ್ಲಲ್ಲಿ ಸಂಘಟಿತರಾಗಿ ತಮ್ಮ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳಲು ಸಂಸ್ಥೆಗಳನ್ನು ಅನೇಕ ಪ್ರಾಂತ್ಯಗಳಲ್ಲಿ ಹುಟ್ಟುಹಾಕಿದರು.

ಲಾರ್ಡ್ ಲಿಟ್ಟನ್ ಪತ್ರಿಕೋದ್ಯಮದಲ್ಲಿ ಜನರನ್ನು ನಿಯಂತ್ರಿಸಲು 1878ರಲ್ಲಿ ‘ದೇಶೀಯ ಪತ್ರಿಕೆಗಳ ನಿಯಂತ್ರಣ ಕಾಯ್ದೆ’ ಒಂದೆಡೆ ಜಾರಿಗೆ ತಂದರೆ, ಮತ್ತೊಂದೆಡೆ ಲಾರ್ಡ್ ರಿಪ್ಪನ್ ಇಲ್ಬರ್ಟ್ ಮಸೂದೆಯನ್ನು ಜಾರಿಗೆ ತಂದು, ಏಕರೂಪ ಕಾನೂನು ವ್ಯವಸ್ಥೆಗೆ ದಾರಿ ಮಾಡಿಕೊಟ್ಟನು.

 ಈ ಮಸೂದೆಯನ್ನು ವಿರೋಧಿಸಿ ಭಾರತದಲ್ಲಿನ ಬ್ರಿಟಿಷರು ಸಂಘಟಿತ ಪ್ರಯತ್ನ ನಡೆಸಿ ಜಯಶೀಲರಾದರು. ದೇಶಾದಾದ್ಯಂತ ಹಲವಾರು ರೀತಿಯ ಹೋರಾಟಗಳ ಫಲವಾಗಿ ಸ್ವಾತಂತ್ರ್ಯ ಹೋರಾಟವು ಒಂದು ಸ್ವರೂಪವನ್ನು ಪಡೆಯಲು ಸಾಧ್ಯವಾಯಿತು.

ಇನ್ನೂ ಮುಂದೆ ಸಶಸ್ತ್ರ ಹೋರಾಟಗಳು ಉದ್ಭವವಾಗಬಾರದೆಂದು ಬ್ರಿಟಿಷರು ಕಾರ್ಯತಂತ್ರವನ್ನು ರೂಪಿಸಿದರು. ಪರಿಣಾಮವಾಗಿ 1858ರ ರಾಣಿ ಮಹಾಸನ್ನದನ್ನು ಬ್ರಿಟಿಷ್ ಸರ್ಕಾರವು ಘೋಷಿಸಿ ಭಾರತೀಯರನ್ನು ಬ್ರಿಟನ್ನಿನ ಪ್ರಜೆಗಳೆಂದು ಪರಿಗಣಿಸಿತು.

 ಆ ಮೂಲಕ ಭಾರತೀಯರಿಗೆ ಅನೇಕ ಬಗೆಯ ಸವಲತ್ತುಗಳನ್ನು ನೀಡಲು ಬ್ರಿಟಿಷ್ ಸರ್ಕಾರ ಘೋಷಿಸಿತು. ನಂತರದ ಬೆಳವಣಿಗೆಯಲ್ಲಿ ಉನ್ನತ ವರ್ಗದ ಇಂಗ್ಲಿಷ್ ವಿದ್ಯಾಭ್ಯಾಸವನ್ನು ಕಲಿತ ಹೊಸ ಪೀಳಿಗೆಯ ಭಾರತೀಯರು ಸಂವಿಧಾನಾತ್ಮಕವಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಲು ಆರಂಭಿಸಿದರು.

 ಇವರ ಒಟ್ಟಾರೆ ಪ್ರಯತ್ನಗಳ ಪ್ರತಿಫಲವೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಗೆ ನಾಂದಿಯಾಯಿತು.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್

 ರಾಮ್ ಮೋಹನ್ ರಾಯರವರ ಕಾಲದಿಂದಲೂ ಮಧ್ಯಮ ವರ್ಗದ ಭಾರತೀಯರ ಮನಸ್ಸು ಹೊಸ ಹೊಸ ಸಂದರ್ಭಗಳಲ್ಲಿ ಹೊಸ ಸವಾಲುಗಳನ್ನು ಎದುರಿಸಲು ಸಜ್ಜಾಗುತ್ತಿತ್ತು. ಈ ನಿಟ್ಟಿನಲ್ಲಿ ದೇಶಾದ್ಯಂತ ಹಲವಾರು ಸಂಘ ಸಂಸ್ಥೆಗಳು ಹುಟ್ಟಿದವು.

 ಹೀಗೆ ಸ್ಥಾಪನೆಯಾದ ಸಂಘಟನೆಗಳಲ್ಲಿ ‘ದಿ ಹಿಂದೂ ಮೇಳ’, ‘ದಿ ಈಸ್ಟ್ ಇಂಡಿಯಾ ಅಸೋಸಿಯೇಷನ್’, ‘ಪೂನಾ ಸಾರ್ವಜನಿಕ ಸಭಾ’ ಮತ್ತು ‘ದಿ ಇಂಡಿಯನ್ ಅಸೋಸಿಯೇಷನ್’ ಪ್ರಮುಖವಾಗಿದ್ದವು. ಇವುಗಳು ಸೀಮಿತ ಎಲ್ಲೆ ಮತ್ತು ಹಿತಾಸಕ್ತಿಗಳನ್ನು ಒಳಗೊಂಡಿದ್ದವು.

 ಕಾಲಾಂತರದಲ್ಲಿ ರಾಷ್ಟ್ರಮಟ್ಟದಲ್ಲಿ ಒಗ್ಗೂಡಲು ಕಾತುರದಿಂದ ಕಾಯುತ್ತಿದ್ದವು. ಇಂತಹ ಒಂದು ಅಖಿಲ ಭಾರತೀಯ ಮಟ್ಟದ ಸಂಘಟನೆಯನ್ನು ಸ್ಥಾಪಿಸುವ ಸಂದರ್ಭವು ಬಂದಿತು.

 ಅದು 1885ರಲ್ಲಿ ಎ.ಓ. ಹ್ಯೂಮ್ ಎಂಬ ನಿವೃತ್ತ ಸಿವಿಲ್ಸರ್ವಿಸ್ ಅಧಿಕಾರಿಯ ಮೂಲಕ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಯೊಂದಿಗೆ ಈಡೇರಿತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಭಾರತೀಯರಲ್ಲಿರಾಜಕೀಯ ಪ್ರಜ್ಞೆ ಮತ್ತು ರಾಷ್ಟ್ರೀಯತೆಯ ಮನೋಭಾವನೆಯನ್ನು ವೃದ್ಧಿಸಲು ಶ್ರಮಿಸಿತು.

 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಭಾರತೀಯರಲ್ಲಿದ್ದ ಹಲವಾರು ವೈವಿದ್ಯತೆಗಳ ನಡುವೆಯೂ ರಾಷ್ಟ್ರೀಯ ಪ್ರಜ್ಞೆಯನ್ನು ಜಾಗೃತಗೊಳಿಸಲು ಪ್ರಯತ್ನಿಸಿತು.

 ದೇಶೀ ಭಾಷೆ ಗಳಲ್ಲಿ ಪತ್ರಿಕೆಗಳನ್ನು ಪ್ರಕಟಿಸಿ ಆ ಮೂಲಕ ರಾಜಕೀಯ ಸಮಸ್ಯೆಗಳ ಚರ್ಚೆ ಆರಂಭಿಸಿತು. ಇದರಿಂದಾಗಿ ರಾಜಕೀಯ ಸಮಸ್ಯೆಗಳು ಮತ್ತು ವಿಚಾರಗಳು ಜನರ ಮನಮುಟ್ಟಿದವು.

 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಬಲವರ್ಧನೆಯನ್ನು ಗಮನಿಸಿದ ಬ್ರಿಟಿಷರು ತಮ್ಮ ಒಡೆದು ಆಳುವ ನೀತಿಯನ್ನು ಜಾರಿಗೆ ತಂದರು. ಹಿಂದೂ-ಮುಸ್ಲಿಮರನ್ನು ಬೇರ್ಪಡಿಸಿದರು. ಆದರೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ರಾಷ್ಟ್ರೀಯ ವಿಚಾರಗಳಿಗೆ ಸಂಬಂಧಪಟ್ಟಂತೆ ರಚಾನಾತ್ಮಕವಾದ ಕಾರ್ಯತಂತ್ರಗಳನ್ನು ರೂಪಿಸಿತು.

 19ನೆಯ ಶತಮಾನದ ಕೊನೆಯ ಭಾಗದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನಲ್ಲಿ ಭಿನ್ನಮತ ಕಾಣಿಸಿಕೊಂಡಿತು. ಕಾರ್ಯತಂತ್ರ, ನಂಬಿಕೆಗಳು ಮತ್ತು ಹೋರಾಟದ ಮಾದರಿಯಿಂದಾಗಿ ಅವರುಗಳನ್ನು ಮಂದಗಾಮಿಗಳು ಮತ್ತು ತೀವ್ರವಾದಿಗಳೆಂದು ಗುರುತಿಸುತ್ತಾರೆ.

ಮಂದಗಾಮಿಗಳು

 ಸಾಂಪ್ರದಾಯಿಕವಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಪ್ರಾರಂಭದ ಇಪ್ಪತ್ತು ವರ್ಷಗಳನ್ನು ‘ಮಂದಗಾಮಿಯುಗ’ ಎನ್ನುತ್ತಾರೆ.

 ಮಂದಗಾಮಿಗಳಲ್ಲಿಎಂ.ಜಿ. ರಾನಡೆ, ಸುರೇಂದ್ರನಾಥ ಬ್ಯಾನರ್ಜಿ, ದಾದಾ ಬಾಯಿ ನವರೋಜಿ, ಗೋಪಾಲಕೃಷ್ಣ ಗೋಖಲೆ ಇವರುಗಳನ್ನು ಪ್ರಮುಖವಾಗಿ ಗುರುತಿಸಬಹುದು.

 ಮಂದಗಾಮಿಗಳು ಬ್ರಿಟಿಷ್ ಆಳ್ವಿಕೆ ಮತ್ತು ನ್ಯಾಯಪರತೆಯಲ್ಲಿ ನಂಬಿಕೆ ಇಟ್ಟಿದ್ದರು. ಸಾಂವಿಧಾನಿಕ ಚೌಕಟ್ಟಿನೊಳಗೆ ಪ್ರಾರ್ಥನೆ ಮತ್ತು ಮನವಿಗಳ ಮೂಲಕ ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿಡುತ್ತಿದ್ದರು.

 ಮಂದಗಾಮಿಗಳು ಜನರಿಗೆ ರಾಜಕೀಯ ಶಿಕ್ಷಣವನ್ನು ನೀಡುವ ಪ್ರಯತ್ನ ಮಾಡಿದರು. ಇವರು ಸಮಸ್ಯೆಗಳ ಬಗ್ಗೆ ಸಭೆಗಳನ್ನು ನಡೆಸಿ, ಚರ್ಚಿಸಿ, ಸರ್ಕಾರಕ್ಕೆಮನವಿಗಳನ್ನು ಸಲ್ಲಿಸಿದರು.

 ದೇಶದ ಕೈಗಾರಿಕೆಗಳ ಅಭಿವೃದ್ಧಿ, ಸೈನಿಕ ವೆಚ್ಚ ಕಡಿಮೆ ಮಾಡುವುದು, ಉತ್ತಮ ಶಿಕ್ಷಣ ಕೊಡುವುದು, ಬಡತನದ ಬಗ್ಗೆ ಅಧ್ಯಯನ ನಡೆಸಲು ಬ್ರಿಟಿಷ್ ಸರ್ಕಾರವನ್ನು ಒತ್ತಾಯಿಸುವುದು ಇವೇ ಮೊದಲಾದ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟರು.

ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯಿಂದಾದ ದುಷ್ಪರಿಣಾಮಗಳನ್ನು ಮೊಟ್ಟಮೊದಲನೆಯ ಬಾರಿಗೆ ಮಂದಗಾಮಿಗಳು ಕೂಲಂಕಷವಾಗಿ ಅವಲೋಕಿಸುವ ಪ್ರಯತ್ನ ಮಾಡಿದರು.

 ಭಾರತದ ಸಂಪತ್ತು ಯಾವ ರೀತಿಯಲ್ಲಿ ಇಂಗ್ಲೆಂಡಿಗೆ ಸೋರಿ ಹೋಗುತ್ತಿದೆ ಎಂಬುದನ್ನು ಅಂಕಿ ಅಂಶಗಳೊಂದಿಗೆ ಅವರು ವಿವರಿಸಿದರು. ದಾದಾಬಾಯಿ ನವರೋಜಿಯವರು ಇಂಗ್ಲೆಂಡಿಗೆ ಸೋರಿಹೋಗುವ ಸಂಪತ್ತಿನ ಬಗ್ಗೆ ವಿಶ್ಲೇಷಿಸಿದರು.

 ಅವರು ಅದನ್ನು ‘ಸಂಪತ್ತಿನ ಸೋರುವಿಕೆ ಸಿದ್ಧಾಂತ’ (Drain Theory) ಎಂದು ಕರೆದರು. ಆಮದನ್ನು ಹೆಚ್ಚಿಸಿ ರಫ್ತನ್ನು ಕಡಿಮೆ ಮಾಡಿದ್ದರಿಂದ ಪ್ರತಿಕೂಲ ಸಂದಾಯ ಉಂಟಾಗಿ ದೇಶದ ಸಂಪತ್ತು ಇಂಗ್ಲೆಂಡಿಗೆ ಹರಿಯಲು ಕಾರಣವಾಯಿತೆಂದು ಅವರು ಪ್ರತಿಪಾದಿಸಿದರು.

 ಬ್ರಿಟಿಷ್ ಅಧಿಕಾರಿಗಳಿಗೆ ನೀಡುತ್ತಿದ್ದ ವೇತನ, ನಿವೃತ್ತಿ ವೇತನ ಮತ್ತು ಆಡಳಿತಾತ್ಮಕ ವೆಚ್ಚವನ್ನು ಭಾರತವೇ ಭರಿಸಬೇಕಾದ ಹಿನ್ನೆಲೆಯಲ್ಲಿ ಅಪಾರವಾದ ಸಂಪತ್ತು ಬ್ರಿಟನ್ನಿಗೆ ಹರಿದು ಹೋಗುತ್ತಿತ್ತು ಎಂಬುದನ್ನು ಅವರು ವಿವರವಾಗಿ ಜನರ ಮುಂದಿಟ್ಟರು. ಮಂದಗಾಮಿಗಳ ಕಾಲವನ್ನು ಉದಾರ ರಾಷ್ಟ್ರವಾದದ ಕಾಲವೆಂದು ಹೇಳಲಾಗಿದೆ.

ತೀವ್ರವಾದಿಗಳು

 ಮಂದಗಾಮಿಗಳ ಮೃದು ದೋರಣೆಯಿಂದ ಕಾಂಗ್ರೆಸಿಗರಲ್ಲೇ ಅಸಂಧೋಷ್ಟರಾಗಿದ್ದ ಇನ್ನೊಂದು ಗುಂಪು ಇವರನ್ನು ‘ರಾಜಕೀಯ ಭಿಕ್ಷುಕರು’ ಎಂದು ಕರೆದರು.

ಮಂದಗಾಮಿಗಳ ಮೃದುದೋರಣೆಯನ್ನು ಟೀಕೆ ಮಾಡುತ್ತಾ, ತೀವ್ರವಾದ ನಿಲುವುಗಳನ್ನು ಪ್ರತಿಪಾದಿಸುತ್ತಾ ಬಂದ ಬಣವನ್ನು ತೀವ್ರವಾದಿಗಳೆಂದು ಗುರುತಿಸಲಾಗಿದೆ.

ಅರಬಿಂದೋ ಘೋಷ್, ಬಿಪಿನ್ಚಂದ್ರ ಪಾಲ್, ಲಾಲ ಲಜಪತ ರಾಯ್ ಮತ್ತು ಬಾಲಗಂಗಾಧರ್ ತಿಲಕ್ ಮುಂತಾದವರು ಈ ಬಣದ ಪ್ರಮುಖರಾಗಿದ್ದರು.

ಬಂಗಾಳದ ವಿಭಜನೆ :

ಬಂಗಾಳವು ಬ್ರಿಟಿಷ್ ವಿರೋಧಿ ಭಾವನೆ ಮತ್ತು ಚಟುವಟಿಕೆಗಳ ಕೇಂದ್ರವಾಗಿತ್ತು. ಇದನ್ನು ಹತ್ತಿಕ್ಕಲು ವೈಸ್ರಾಯ್ ಲಾರ್ಡ್ ಕರ್ಜನ್ನನು ಆಡಳಿತಾತ್ಮಕ ನೆಪವನ್ನು ಮುಂದಿಟ್ಟುಕೊಂಡು ಬಂಗಾಳ ವಿಭಜನೆಯ ಯೋಜನೆಯನ್ನು ರೂಪಿಸಿದನು.

 ಪೂರ್ವ ಮತ್ತು ಪಶ್ಚಿಮ ಬಂಗಾಳವನ್ನು ಹಿಂದೂ ಮತ್ತು ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಾಗಿ ವಿಂಗಡಿಸಿದನು. ಹೀಗೆ ಸಮುದಾಯಗಳ ನಡುವೆ ಕಂದಕವನ್ನುಂಟುಮಾಡಿ ಸ್ವಾತಂತ್ರ್ಯ ಹೋರಾಟದ ತೀವ್ರತೆಯನ್ನು ಕುಗ್ಗಿಸುವ ಸಂಚನ್ನು ರೂಪಿಸಿದನು.

 ಬ್ರಿಟಿಷರ ಒಡೆದು ಆಳುವ ನೀತಿಯ ಪ್ರತೀಕವಾಗಿದ್ದ 1905ರ ಬಂಗಾಳ ವಿಭಜನೆಯನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ವಿರೋಧಿಸಿತು. ಆದರೆ 1906ರಲ್ಲಿ ಸ್ಥಾಪನೆಯಾದ ಮುಸ್ಲಿಂ ಲೀಗ್ ಬಂಗಾಳ ವಿಭಜನೆಯನ್ನು ಬೆಂಬಲಿಸಿತು.

 ಬಂಗಾಳದ ವಿಭಜನೆಯ ವಿರುದ್ಧ ದೇಶದಾದ್ಯಂತ ಪ್ರತಿರೋಧಗಳು ವ್ಯಕ್ತವಾದವು. ಪ್ರತಿರೋಧದ ಒಂದು ಬಗೆಯಾಗಿ ಸ್ವದೇಶಿ ಚಳುವಳಿಯನ್ನು ಪ್ರಾರಂಭಿಸಲಾಯಿತು.

 ಇದನ್ನು ದೇಶದಾದ್ಯಂತ ಕೊಂಡೊಯ್ದವರು ತೀವ್ರವಾದಿಗಳು. ವಿದೇಶಿ ವಸ್ತುಗಳು ಮತ್ತು ಅದನ್ನು ಪ್ರೋತ್ಸಾಹಿಸುವ ಸಂಸ್ಥೆಗಳನ್ನು ಬಹಿಷ್ಕರಿಸಲು ಸ್ವದೇಶಿ ಆಂದೋಲನವು ಕರೆ ನೀಡಿತು.

 ಸ್ವದೇಶಿ ವಸ್ತುಗಳನ್ನು ಬಳಸುವಂತೆ ಅವರು ಭಾರತೀಯರನ್ನು ಪ್ರೇರೇಪಿಸಿದರು. ಭಾರತೀಯರ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಬಂಗಾಳದ ವಿಭಜನೆಯನ್ನು 1911ರಲ್ಲಿ ಬ್ರಿಟಿಷ್ ಸರ್ಕಾರವು ಹಿಂಪಡೆಯಿತು.

 ತೀವ್ರವಾದಿಗಳು ಉತ್ತಮ ಆಳ್ವಿಕೆಯು ಎಂದೂ ಕೂಡ ಸ್ವಯಂ ಆಳ್ವಿಕೆಗೆ ಪರ್ಯಾಯವಾಗಲಾರದೆಂದು ಪ್ರತಿಪಾದಿಸಿದರು. ತಿಲಕರು ‘ಸ್ವರಾಜ್ಯವು ನನ್ನ ಜನ್ಮ ಸಿದ್ಧ ಹಕ್ಕು; ಅದನ್ನು ಪಡೆದೇ ತೀರುವೆ’ ಎಂದು ಘೋಷಿಸಿದರು.

 ಪೂರ್ಣ ಸ್ವರಾಜ್ಯವನ್ನು ಪಡೆಯುವುದು ತೀವ್ರವಾದಿಗಳ ಗುರಿಯಾಗಿತ್ತು. ಇವರು ಸ್ವಾತಂತ್ರ್ಯ ಹೋರಾಟಕ್ಕೆ ಜನಸಾಮಾನ್ಯರನ್ನು ಸಂಘಟಿಸುವ ಪ್ರಯತ್ನ ಮಾಡಿದರು. ಈ ಹಿನ್ನೆಲೆಯಲ್ಲಿ ಧಾರ್ಮಿಕ ಆಚರಣೆಗಳ ಮೂಲಕ ಜನರನ್ನು ಸಂಘಟಿಸಿ ಬ್ರಿಟಿಷ್ ವಿರೋಧಿ ಹೋರಾಟಕ್ಕೆ ಅವರನ್ನು ಸಜ್ಜುಗೊಳಿಸಿದರು.

 ತಿಲಕರು ಮರಾಠಿ ಭಾಷೆ ಯಲ್ಲಿ ‘ಕೇಸರಿ’ ಮತ್ತು ಇಂಗ್ಲಿಷ್ ಭಾಷೆ ಯಲ್ಲಿ ‘ಮರಾಠ’ ಪತ್ರಿಕೆಗಳನ್ನು ಬ್ರಿಟಿಷರ ವಿರುದ್ಧದ ಹೋರಾಟಕ್ಕೆ ಬಳಸಿಕೊಂಡರು.

 ಈ ಪತ್ರಿಕೆಗಳ ಮೂಲಕ ಜನಸಾಮಾನ್ಯರನ್ನು ರಾಷ್ಟ್ರೀಯ ಹೋರಾಟಕ್ಕೆ ಪ್ರೇರೇಪಿಸಿದರು. ಅವರ ಕ್ರಾಂತಿಕಾರಕ ಬರವಣಿಗೆಗಳು ಜನರ ಉದ್ರೇಕಕ್ಕೆ ಕಾರಣವಾಯಿತು ಎಂಬ ಹಿನ್ನೆಲೆಯಲ್ಲಿ ಬ್ರಿಟಿಷ್ ಸರ್ಕಾರವು ತಿಲಕರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿತು.

ಕ್ರಾಂತಿಕಾರಿಗಳು

 ಕ್ರಾಂತಿಕಾರಿಗಳು ಪೂರ್ಣ ಸ್ವಾತಂತ್ರ್ಯದ ಕನಸನ್ನು ಕಂಡಿದ್ದರು. ಭಾರತೀಯರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದ ಬ್ರಿಟಿಷರನ್ನು ಹಿಂಸಾತ್ಮಕ ಮಾರ್ಗದಿಂದ ಮಾತ್ರ ಭಾರತದಿಂದ ಓಡಿಸಬಹುದೆಂದು ಅವರು ಬಲವಾಗಿ ನಂಬಿದ್ದರು.

 ಇವರುಗಳು ರಹಸ್ಯಸಂಘಗಳ ಮೂಲಕ ಭಾರತದಲ್ಲಿ ಮತ್ತು ವಿದೇಶಗಳಲ್ಲಿ ತಮ್ಮ ಶಾಖೆಗಳನ್ನು ಸ್ಥಾಪಿಸಿ ಹಣಕಾಸು, ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವ ಕಾರ್ಯದೊಂದಿಗೆ ಕ್ರಾಂತಿಕಾರಿಗಳಿಗೆ ತರಬೇತಿ ನೀಡುವಲ್ಲಿ ನಿರತರಾಗಿದ್ದರು. ‘ಅನುಶೀಲನ ಸಮಿತಿ’ ಮತ್ತು ‘ಅಭಿನವ ಭಾರತ’ ಇಂತಹ ರಹಸ್ಯ ಸಂಘಟನೆಗಳಲ್ಲಿ ಮುಖ್ಯವಾದವು.

ಇವರು ತಮ್ಮ ಗುರಿ ಸಾಧನೆಗಾಗಿ ಬಾಂಬುಗಳು ಮತ್ತು ಬಂದೂಕುಗಳ ಪ್ರಯೋಗ ಮಾಡಿದರು. ಸರ್ಕಾರವು ಇವರನ್ನು ಹತ್ತಿಕ್ಕುವ ಸರ್ವ ಪ್ರಯತ್ನವನ್ನು ಮಾಡಿತು.

 ಕ್ರಾಂತಿಕಾರಿಗಳನ್ನು ಕೊಲೆ ಸಂಚಿನ ಆರೋಪದ ಮೇಲೆ ಬಂಧಿಸಿ, ಅವರುಗಳನ್ನು ತಪ್ಪಿತಸ್ಥರನ್ನಾಗಿ ಗುರುತಿಸಿ ಜೀವಾವಧಿ ಶಿಕ್ಷೆಯನ್ನು ವಿಧಿಸಿತು. ಈ ಸಂಧರ್ಭದಲ್ಲಿ ಅನೇಕರನ್ನು ಗಲ್ಲಿಗೇರಿಸಲಾಯಿತು.

 ವಿ.ಡಿ. ಸಾವರ್ಕರ್, ಅರಬಿಂದೋ ಘೋಷ್, ಶ್ಯಾಮಾಜಿ ಕೃಷ್ಣವರ್ಮ, ರಾಸ್ ಬಿಹಾರಿ ಘೋಷ್, ಮ್ಯಡಮ್ ಕಾಮಾ, ಖುದಿರಾಮ್ ಬೋಸ್, ರಾಮ್ಪ್ರಸಾದ ಬಿಸ್ಮಿಲ್, ಭಗತ್ ಸಿಂಗ್, ಚಂದ್ರಶೇಖರ ಅಜಾದ್ -ಇವರುಗಳು ಕ್ರಾಂತಿಕಾರಿಗಳಲ್ಲಿ ಪ್ರಮುಖರಾಗಿದ್ದರು.

 ಕ್ರಾಂತಿಕಾರಿಗಳು ಕ್ರಾಂತಿಕಾರಿ ಮಾರ್ಗಗಳ ಮೂಲಕ ಸ್ವಾತಂತ್ರ್ಯವನ್ನು ತಂದು ಕೊಡುವ ಅವರ ಕನಸು ನನಸಾಗಲಿಲ್ಲ. 

 ಆದಾಗ್ಯೂ ರಾಷ್ಟ್ರೀಯ ಆಂದೋಲನಕ್ಕೆ ಅವರು ಸ್ಫೂರ್ತಿಯ ಚಿಲುಮೆಯಾಗಿದ್ದರು.

 ತೀವ್ರವಾದಿಗಳಾಗಿದ್ದ ಹಲವು ನಾಯಕರು ಮುಂದಿನ ದಿನಗಳಲ್ಲಿ ಕ್ರಾಂತಿಕಾರಿಗಳಾಗಿ ತಮ್ಮ ಹೋರಾಟವನ್ನು ಮುಂದುವರಿಸಿದರು. ಅವರುಗಳಲ್ಲಿ ಅರವಿಂದ ಘೋಷರು ಪ್ರಮುಖರು.

ಗಾಂಧಿಯುಗ (1920-1947)

 ಮಹಾತ್ಮ ಗಾಂಧೀಜಿಯವರು ಇಂಗ್ಲೆಂಡಿನಲ್ಲಿ ಬ್ಯಾರಿಸ್ಟರ್ ಪದವಿ ಪಡೆದು ವಕೀಲಿ ವೃತ್ತಿಯನ್ನು ದಕ್ಷಿಣ ಆಫ್ರಿಕಾದಲ್ಲಿ ಆರಂಭಿಸಿದರು. ದಕ್ಷಿಣ ಆಫ್ರಿಕಾವನ್ನು ಆಳುತ್ತಿದ್ದ ಬ್ರಿಟಿಷರು ವರ್ಣಭೇದ ನೀತಿಯನ್ನು ಅನುಸರಿಸುತ್ತ ಮುಖ್ಯವಾಗಿ ಭಾರತೀಯರನ್ನು ಮತ್ತು ಆಫ್ರಿಕನರನ್ನು ಬಹಳ ಕೀಳಾಗಿ ಕಾಣುತ್ತಿದ್ದರು.


 ಕೂಲಿ ಕೆಲಸಗಳನ್ನು ಮಾಡುತ್ತಿದ್ದ ಬಹಳಷ್ಟು ಇಂತಹ ಜನರು ಬಿಳಿಯರೊಂದಿಗೆ ರೈಲಿನಲ್ಲಿ ಪ್ರಯಾಣಿಸಬಾರದಾಗಿತ್ತು, ಸಹ ಭೋಜನ ಮಾಡಬಾರದಾಗಿತ್ತು. ಬಿಳಿಯರು ಕೂಲಿ ಜನರೊಂದಿಗೆ ಹಿಂಸಾತ್ಮಕವಾಗಿ ನಡೆದುಕೊಳ್ಳುತ್ತಿದ್ದರು.

 ಗಾಂಧೀಜಿಯವರು ಅಂತಹವರನ್ನು ಸಂಘಟಿಸಿ ಅವರ ಸುಖದುಃಖಗಳಲ್ಲಿ ಪಾಲ್ಗೊಂಡು ಬ್ರಿಟಿಷರ ವಿರುದ್ಧ ಶಾಂತಿಯುತವಾದ ಚಳುವಳಿಗಳನ್ನು, ಪ್ರತಿಭಟನೆಗಳನ್ನು ಕೈಗೊಂಡರು. ದಕ್ಷಿಣ ಆಫ್ರಿಕಾದಲ್ಲಿ ಬ್ರಿಟಿಷರ ವಿರುದ್ಧ ಮಾಡಿದ ಚಳುವಳಿಯ ಸ್ಪೂರ್ತಿಯು ಮುಂದೆ ಭಾರತೀಯರನ್ನು ಬ್ರಿಟಿಷರಿಂದ ವಿಮೋಚನೆ ಮಾಡಲು ಸಹಕಾರಿಯಾಯಿತು.

 ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ 1920ರಿಂದ 1947ರ ಕಾಲವನ್ನು ‘ಗಾಂಧಿಯುಗ’ ವೆಂದು ಕರೆಯಲಾಗಿದೆ. ಭಾರತವು ಸ್ವಾತಂತ್ರ್ಯ ಪಡೆಯುವವರೆಗೂ ನಡೆದ ಘಟನಾವಳಿಗಳಲ್ಲಿ ಗಾಂಧೀಜಿಯವರು ಮುಖ್ಯ ಭೂಮಿಕೆಯಲ್ಲಿದ್ದರು.

 ಮಹಾತ್ಮ ಗಾಂಧೀಜಿಯವರ ಪ್ರವೇಶದಿಂದಾಗಿ ಸ್ವಾತಂತ್ರ್ಯ ಚಳುವಳಿಯು ಹೊಸ ಆಯಾಮವನ್ನು ಪಡೆಯಿತು.

ಗಾಂಧೀಜಿಯವರು ತಮ್ಮ ಹೋರಾಟದಲ್ಲಿ ‘ಪರೋಕ್ಷ ಪ್ರತಿರೋಧ’, ‘ಅಹಿಂಸೆ’ ಮತ್ತು ‘ಸತ್ಯಾಗ್ರಹವನ್ನು’ ಪ್ರಮುಖ ತಂತ್ರಗಳನ್ನಾಗಿ ಬಳಸಿಕೊಂಡರು. ತಮ್ಮ ಸಿದ್ಧಾಂತಗಳನ್ನು ಅವರು ‘ಹಿಂದ್ ಸ್ವರಾಜ್’ ಪತ್ರಿಕೆಯಲ್ಲಿ ವ್ಯಕ್ತಪಡಿಸುತ್ತಿದ್ದರು.

ಸತ್ಯಾಗ್ರಹವು ಇವರ ಹೋರಾಟದ ಪ್ರಮುಖ ಅಸ್ತ್ರವಾಯಿತು. ದಕ್ಷಿಣ ಆಫ್ರಿಕಾದಲ್ಲಿದ್ದಾಗ ಗಾಂಧೀಜಿ ಭಾರತದಲ್ಲಿ ತೀವ್ರಗೊಂಡ ಕ್ರಾಂತಿಕಾರಕ ಚಟುವಟಿಕೆಗಳ ಹಿನ್ನೆಲೆಯಲ್ಲಿ ಅದನ್ನು ಹತ್ತಿಕ್ಕುವ ಉದ್ದೇಶದಿಂದ ಅನೇಕ ಕಾಯ್ದೆಗಳನ್ನು ತರಲಾಯಿತು.

ಅವುಗಳಲ್ಲಿ ಫೆಬ್ರವರಿ 1919ರಲ್ಲಿ ಜಾರಿಗೆ ತರಲಾದ ರೌಲತ್ ಕಾಯಿದೆಯು ಮುಖ್ಯವಾದುದು. ಕೇವಲ ಗುಮಾನಿಯ ಮೇಲೆ ಜನರನ್ನು ಬಂಧಿಸಿ ವಿಚಾರಣೆ ನಡೆಸುವ ಅಧಿಕಾರವನ್ನು ನ್ಯಾಯಾಧೀಶರಿಗೆ ಇದು ನೀಡಿತು.

ಗಾಂಧೀಜಿಯವರು ಈ ಅಮಾನವೀಯ ಕಾಯ್ದೆಯ ವಿರುದ್ಧ ತಮ್ಮ ಹೋರಾಟದ ಸಾತ್ವಿಕ ಅಸ್ತ್ರವಾದ ಸತ್ಯಾಗ್ರಹವನ್ನು ಬಳಸಿದರು.

ದೇಶದಾದ್ಯಂತ ಇದಕ್ಕೆ ವ್ಯಾಪಕ ಬೆಂಬಲ ದೊರೆಯಿತು. ಸಹಸ್ರಾರು ಭಾರತೀಯರು ಈ ಮೂಲಕ ಬ್ರಿಟಿಷರ ವಿರುದ್ಧ ಹೋರಾಟದಲ್ಲಿ ಭಾಗವಹಿಸಿದರು.

ಜಲಿಯನ್ವಾಲಾಬಾಗ್ ಹತ್ಯಾಕಾಂಡ

 ರೌಲತ್ ಕಾಯ್ದೆಯ ವಿರುದ್ಧ ಪಂಜಾಬಿನಲ್ಲಿ ಚಳುವಳಿಯು ವ್ಯಾಪಕವಾಗಿ ಹರಡಿತು. ಅಲ್ಲಲ್ಲಿ ಇದು ಹಿಂಸಾತ್ಮಕ ಸ್ವರೂಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಸರ್ಕಾರವು ಅಮೃತಸರ ನಗರವನ್ನು ಜನರಲ್ ಡಯರ್ ಎಂಬ ಸೇನಾಧಿಕಾರಿಯ ಉಸ್ತುವಾರಿಗೆ ನೀಡಿತು.

 ಜನರಲ್ ಡಯರ್ ಪ್ರಕ್ಷುಬ್ದ ಪರಿಸ್ಥಿತಿಯಲ್ಲಿ ನಗರವನ್ನು ಸೇನಾಳ್ವಿಕೆಗೆ ಒಳಪಡಿಸಿ ಸಭೆಗಳನ್ನು ನಿಷೇಧಿಸಿದನು. ಆದರೆ, ಜಲಿಯನ್ವಾಲಾಬಾಗ್ನಲ್ಲಿ ಸಭೆ ಸೇರಲು ಹೋರಾಟಗಾರರು ಮೊದಲೇ ನಿರ್ಧರಿಸಿದ್ದರು.

 ಅವರಿಗೆ ಈ ನಿಷೇಧದ ಬಗ್ಗೆ ಪೂರ್ಣ ತಿಳುವಳಿಕೆ ಇರಲಿಲ್ಲ. ಸುಮಾರು 20 ಸಾವಿರ ಜನ ರೌಲತ್ ಕಾಯ್ದೆಯ ವಿರುದ್ಧದ ಪ್ರತಿಭಟನಾ ಸಭೆಯಲ್ಲಿ ಸೇರಿದ್ದರು. ಸುತ್ತಲೂ ಎತ್ತರವಾದ ಗೋಡೆಗಳಿಂದ, ಕಿರಿದಾದ ಪ್ರವೇಶದಿಂದ ಕೂಡಿದ ಜಲಿಯನ್ ವಾಲಾಬಾಗ್ನಲ್ಲಿ ಸಭೆಯು ಶಾಂತಿಯಿಂದ ನಡೆಯುತ್ತಿತ್ತು.

ತನ್ನ ಸೈನ್ಯದೊಂದಿಗೆ ಬಂದ ಜನರಲ್ ಡಯರ್ನು ಯಾವ ಮುನ್ಸೂಚನೆಯನ್ನು ನೀಡದೆ ಶಾಂತಿಯುತವಾಗಿ ಪ್ರತಿಭಟನಾ ಸಭೆ ಸೇರಿದ್ದ ಜನರ ಮೇಲೆ ಅಮಾನುಷವಾಗಿ ಗುಂಡಿನ ಮಳೆಗರೆದನು.

• ಈ ಹತ್ಯಾಕಾಂಡದಲ್ಲಿ 379 ಪ್ರತಿಭಟನಾಕಾರರು ಪ್ರಾಣ ಕಳೆದುಕೊಂಡರು. ಸಹಸ್ರಾರು ಜನರು ಗಾಯಗೊಂಡರು. ಈ ಘಟನೆಯನ್ನು ಜಲಿಯನ್ ವಾಲಾಬಾಗ್ ದುರಂತ ಎಂದು ಕರೆಯುತ್ತಾರೆ.

ಖಿಲಾಫತ್ ಚಳುವಳಿ
• ಟರ್ಕಿಯ ಸುಲ್ತಾನರು ಮುಸ್ಲಿಮರ ಧಾರ್ಮಿಕ ಮುಖಂಡರೂ ಆಗಿದ್ದು, ಖಲೀಫರೆಂದು ಕರೆಸಿಕೊಳ್ಳುತ್ತಿದ್ದರು. ಮೊದಲನೆಯ ಮಹಾಯುದ್ಧದ ಸಂದರ್ಭದಲ್ಲಿ ಖಲೀಫರ ಮೇಲೆ ನಡೆಯುತ್ತಿದ್ದ ಬ್ರಿಟೀಷರ ದೌರ್ಜನ್ಯವನ್ನು ಖಂಡಿಸಿ ಮುಂಸ್ಲಿಮರು ಜಗತ್ತಿನಾದ್ಯಂತ ಪ್ರತಿಭಟಿಸಿದರು.

• ಅಂತೆಯೇ ಮಹಮದ್ ಅಲಿ ಮತ್ತು ಶೌಕತ್ ಅಲಿ ಸಹೋದರರು ಭಾರತದಲ್ಲಿ ಟರ್ಕರ ಪರವಾದ ಖಿಲಾಫತ್ ಚಳುವಳಿ ಪ್ರಾರಂಭಿಸಿದರು.

• ಹಿಂದೂ ಮುಸ್ಲಿಮರು ಒಗ್ಗಟ್ಟಾಗಿ ಬ್ರಿಟಿಷರ ವಿರುದ್ಧ ಬಂಡೆದ್ದರೆ ಮಾತ್ರ ಬ್ರಿಟಿಷರು ಹಿಮ್ಮೆಟ್ಟುತ್ತಾರೆ ಎನ್ನುವುದು ಗಾಂಧೀಜಿಯವರ ನಂಬಿಕೆಯಾಗಿತ್ತು.

• ಈ ಹಿನ್ನೆಲೆಯಲ್ಲಿ ಮುಸ್ಲಿಮರ ಸಹಭಾಗಿತ್ವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನಲ್ಲಿ ಬಹಳ ಮುಖ್ಯ ಎಂದು ಗಾಂಧೀಜಿ ಭಾವಿಸಿದ್ದರು. ಪರಿಣಾಮವಾಗಿ ಗಾಂಧೀಜಿ ಖಿಲಾಫತ್ ಚಳುವಳಿಗೆ ತಮ್ಮ ಬೆಂಬಲವನ್ನು ನೀಡಿದರು.

• ಈ ಚಳುವಳಿಯು ಹಿಂದೂ ಮುಸ್ಲಿಮರು ಒಂದುಗೂಡಿ ನಡೆಸಿದ ರಾಷ್ಟ್ರವ್ಯಾಪೀ ಆಂದೋಲನವಾಗಿದೆ. ಅನೇಕ ರಾಷ್ಟ್ರೀಯ ನಾಯಕರು ಮತ್ತು ಕಾಂಗ್ರೆಸ್ ಸಂಘಟನೆಯು ಖಿಲಾಫತ್ ಚಳುವಳಿಯ ಬೆಂಬಲಕ್ಕೆ ನಿಂತಿತು.

ಅಸಹಕಾರ ಚಳುವಳಿ
• ಗಾಂಧೀಜಿ ಬ್ರಿಟಿಷರ ವಿರುದ್ಧ 1920ರಲ್ಲಿ ಅಸಹಕಾರ ಚಳುವಳಿಗೆ ಕರೆಯಿತ್ತರು. ಅವರ ಕರೆಯನ್ನು ಬೆಂಬಲಿಸಿ ಶಾಲಾಕಾಲೇಜುಗಳನ್ನು ವಿದ್ಯಾರ್ಥಿಗಳು ಬಹಿಷ್ಕರಿಸಿದರು. ವಕೀಲರು ನ್ಯಾಯಾಲಯಗಳನ್ನು ಬಹಿಷ್ಕರಿಸಿದರು.

• ಭಾರತೀಯ ಗಣ್ಯರು, ಬ್ರಿಟಿಷರು ನೀಡಿದ್ದ ಪುರಸ್ಕಾರಗಳನ್ನು ಹಿಂದಿರುಗಿಸಿದರು. ಈ ಚಳುವಳಿಯನ್ನು ಬೆಂಬಲಿಸಿ ಮೋತಿಲಾಲ್ ನೆಹರು, ಸಿ.ಆರ್.ದಾಸ್ ತಮ್ಮ ವಕೀಲಿ ವೃತ್ತಿಯನ್ನು ತ್ಯಜಿಸಿದರು.

• ಈ ಅವಧಿಯಲ್ಲಿ ಬ್ರಿಟನ್ ರಾಜಕುಮಾರನ ಭಾರತದ ಭೇಟಿಯನ್ನು ವಿರೋಧಿಸಲಾಯಿತು. ರಾಜಕುಮಾರನ ಭೇಟಿಯ ವಿರುದ್ಧವಾಗಿ ದೇಶಾದ್ಯಂತ ಹರತಾಳಗಳು ನಡೆದವು.

• ಅಸಹಕಾರ ಚಳುವಳಿಯ ಸ್ವರೂಪವನ್ನು ಮನಗಂಡ ಬ್ರಿಟಿಷ್ ಸರ್ಕಾರದಲ್ಲಿ ಆತಂಕದ ವಾತಾವರಣ ಉಂಟಾಯಿತು. ಇಂತಹ ಸಂದರ್ಭದಲ್ಲಿ ಉತ್ತರ ಪ್ರದೇಶದ ಚೌರಿಚೌರ ಎಂಬಲ್ಲಿ ಸಾವಿರಾರು ಸ್ವಾತಂತ್ರ್ಯ ಯೋಧರು ಚಳುವಳಿಗೆ ಧುಮುಕಿದರು.

• 1922ರಲ್ಲಿ ಶಾಂತಿಯುತವಾಗಿ ಚಳುವಳಿ ನಡೆಸುತ್ತಿದ್ದ ಚಳುವಳಿಗಾರರ ಮೇಲೆ ಪೋಲಿಸರು ಹಲ್ಲೆ ಮಾಡಿದರು. ಇದರಿಂದ ರೊಚ್ಚಿಗೆದ್ದ ಜನರು ಠಾಣೆಗೆ ನುಗ್ಗಲೆತ್ನಿಸಿದಾಗ ಪೋಲಿಸರು ಗೋಲಿಬಾರ್ ನಡೆಸಿದರು.

• ಪೋಲಿಸರ ಬಳಿ ಇದ್ದ ಶಸ್ತ್ರಾಸ್ತ್ರÀಗಳು ಖಾಲಿಯಾದ ಕಾರಣದಿಂದ ಪೋ ಲಿಸರು ಠಾಣೆಯೊಳಗೆ ಓಡಿದರು. ಕುಪಿತರಾದ ಚಳುವಳಿಗಾರರು ಪೋಲಿಸ್ ಠಾಣೆಗೆ ಬೆಂಕಿ ಹಚ್ಚಿದರು. ಇದರಿಂದ 22 ಜನ ಪೋ ಲಿಸರು ಸಜೀವ ದಹನವಾದರು.

• ಈ ಘಟನೆಯನ್ನು ಇತಿಹಾಸದಲ್ಲಿ ಚೌರಿಚೌರ ಘಟನೆ ಎನ್ನುತ್ತಾರೆ. ಈ ಘಟನೆಯು ಗಾಂಧೀಜಿಯವರನ್ನು ಖಿನ್ನರನ್ನಾಗಿಸಿತು. ಹಾಗೆಯೇ ಚಳುವಳಿಗಾರರ ಹಿಂಸಾತ್ಮಕ ವರ್ತನೆಗಾಗಿ ಗಾಂಧೀಜಿಯವರು ವಿದ ವ್ಯಕ್ತಪಡಿಸಿ ಚಳುವಳಿಯನ್ನು ಹಿಂತೆಗೆದುಕೊಂಡರು.

• ಬ್ರಿಟಿಷ್ ಸರ್ಕಾರವು ಈ ಹಿಂಸಾತ್ಮಕ ಘಟನೆಗೆ ಗಾಂಧೀಜಿಯವರನ್ನು ಹೊಣೆಗಾರರನ್ನಾಗಿಸಿತು. ಸರ್ಕಾರವು ಅವರಿಗೆ ಆರು ವರ್ಷಗಳ ಕಾಲ ಅಸಹಕಾರ ಚಳುವಳಿ ಮೋತಿಲಾಲ್ನೆಹರು ಸೆರಮನೆವಾಸ ವಿಧಿಸಿತು.

• ಆದರೆ 1924ರಲ್ಲಿ ಅನಾರೋಗ್ಯದಿಂದ ಗಾಂಧೀಜಿಯವರನ್ನು ಸರ್ಕಾರವು ಬಿಡುಗಡೆ ಗೊಳಿಸಿತು. 1919ರ ಕಾಯ್ದೆಯು ಚುನಾವಣೆಗಳಲ್ಲಿ ಭಾಗವಹಿಸುವ ಅವಕಾಶವನ್ನು ಭಾರತೀಯರಿಗೆ ನೀಡಿತು. ಆದರೆ ಈ ಕಾಯ್ದೆಯು ಸದುದ್ದೇಶವನ್ನು ಹೊಂದಿಲ್ಲವಾದ್ದರಿಂದ ಕೆಲವು ಕಾಂಗ್ರೆಸ್ಸಿಗರು ಅದನ್ನು ಬಹಿಷ್ಕರಿಸಿದರು.

• 1919ರ ಕಾಯ್ದೆಯಡಿಯಲ್ಲಿ ಮುಂದೆ ನಡೆಯಲಿರುವ ಚುನಾವಣೆಗಳಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಸಿ.ಆರ್.ದಾಸ್, ಮೋತಿಲಾಲ್ ನೆಹರು ಮತ್ತು ಇನ್ನಿತರ ಕೆಲವು ಕಾಂಗ್ರೆಸ್ಸಿಗರು ‘ಸ್ವರಾಜ್ ಪಕ್ಷ’ವನ್ನು 1922ರಲ್ಲಿ ಸ್ಥಾಪಿಸಿದರು. ಹೀಗೆ ಸ್ಥಾಪನೆಗೊಂಡ ಸ್ವರಾಜ್ ಪಕ್ಷವು ಶಾಸನ ಸಭೆಯನ್ನು ಪ್ರವೇಶಿಸಿ ಒಳಗಿನಿಂದಲೇ ಸರ್ಕಾರದ ನೀತಿಯನ್ನು ವಿರೋಧಿಸಿ ಅದರ ಕೆಲಸಕ್ಕೆ ಅಡ್ಡಿಯನ್ನುಂಟು ಮಾಡುವ ಅಭಿಲಾಷೆಯನ್ನು ಹೊಂದಿತ್ತು. 1924ರಲ್ಲಿ ನಡೆದ ಬೆಳಗಾವಿ ಅಧಿವೇಶನದಲ್ಲಿ ಶಾಸನ ಸಭೆಯನ್ನು ಪ್ರವೇಶಿಸುವ ಸ್ವರಾಜ್ಯ ಪಕ್ಷದ ಕಾರ್ಯತಂತ್ರವನ್ನು ಗಾಂಧೀಜಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸಿನ ಕಾರ್ಯಕ್ರಮವಾಗಿ ಒಪ್ಪಿಕೊಂಡರು.

• ಹೀಗೆ ಸ್ವರಾಜ್ಯ ಪಕ್ಷವು ಕಾಂಗ್ರೆಸ್ನಲ್ಲಿ ಸೇರಿತು. 1919ರ ಭಾರತ ಸರ್ಕಾರ ಕಾಯ್ದೆಯ ಪ್ರಕಾರ ಹತ್ತು ವರ್ಷದ ಕೊನೆಯಲ್ಲಿ ಒಂದು ಆಯೋಗವನ್ನು ನೇಮಿಸುವ ಪ್ರಸ್ತಾಪದ ಮುನ್ಸೂಚನೆಯನ್ನು ವ್ಯಕ್ತಪಡಿಸಲಾಗಿತ್ತು.

• 1919ರ ಕಾಯ್ದೆಯ ಕಾರ್ಯವೈಖರಿಯನ್ನು ತಿಳಿದು ಅವಶ್ಯಕತೆಗನುಸಾರವಾಗಿ ಸೂಕ್ತ ಬದಲಾವಣೆಯ ವರದಿಯನ್ನು ಅದು ಸರ್ಕಾರಕ್ಕೆ ಸಲ್ಲಿಸಬೇಕಿತ್ತು.

• ಅದರಂತೆ 1927ರಲ್ಲಿ ಜಾನ್ ಸೈಮನ್ ನೇತೃತ್ವದಲ್ಲಿ ಒಂದು ಆಯೋಗವನ್ನು ನೇಮಿಸಲಾಯಿತು. ಇದು ಬ್ರಿಟಿಷ್ ಸರ್ಕಾರದ ಸಂಸದೀಯ ಆಯೋಗ ಎಂಬ ನೆಪದಲ್ಲಿ ಒಬ್ಬ ಭಾರತೀಯನನ್ನೂ ಒಳಗೊಂಡಿರಲಿಲ್ಲ.

• ಇದರಿಂದ ಇದು ಭಾರತೀಯರಿಗೆ ಮಾಡಿದ ಅವಮಾನವೆಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಭಾವಿಸಿ ಸೈಮನ್ ಆಯೋಗವನ್ನು ಬಹಿಷ್ಕರಿಸಿತು.

• ಸೈಮನ್ ಭಾರತಕ್ಕೆ ಬಂದಾಗ ಪ್ರತಿಭಟನೆಗಳು, ಪ್ರದರ್ಶನಗಳು ನಡೆದವು. ಸೈಮನ್ ‘ಹಿಂದಕ್ಕೆ ಹೋಗು’ ಎಂದರು. ಸೈಮನ್ ಆಯೋಗ ಹೋದ ಕಡೆಯಲ್ಲೆಲ್ಲಾ ಪ್ರತಿಭಟನೆಗಳು, ಹರತಾಳಗಳು, ಪ್ರದರ್ಶನಗಳು ನಡೆದವು.

• ಈ ಸಮಯದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಲಾಲ ಲಜಪತ್ ರಾಯರು ಬ್ರಿಟಿಷ್ ಸಿಪಾಯಿಗಳ ಲಾಟಿ ಏಟಿನಿಂದ ಮರಣ ಹೊಂದಿದರು. ಇದರಿಂದಾಗಿ ಭಾರತೀಯರ ಹೋರಾಟ ಮತ್ತಷ್ಟು ತೀವ್ರವಾಯಿತು.

• ಸರ್ಕಾರದ ವಿರುದ್ಧದ ಈ ಧ್ವನಿಯನ್ನು ತಿಳಿಗೊಳಿಸುವ ಉದ್ದೇಶದಿಂದ ಸೈಮನ್ ಆಯೋಗದ ಕಾರ್ಯವು ಕೊನೆಗೊಳ್ಳುತ್ತಿದ್ದ ಹಾಗೆ ಭಾರತೀಯ ಪ್ರತಿನಿಧಿಗಳ ಸಮಾವೇಶವೊಂದನ್ನು ಕರೆಯಲು ಸರ್ಕಾರವು ನಿಶ್ಚಯಿಸಿತು.

• ಈ ಸಮಾವೇಶದಲ್ಲಿ ಮುಂದಿನ ಸಾಂವಿಧಾನಿಕ ಬೆಳವಣಿಗೆಯ ಸ್ವರೂಪವನ್ನು ರೂಪಿಸಲು ಭಾರತೀಯರಿಗೆ ಅವಕಾಶವನ್ನು ಕಲ್ಪಿಸಲಾಗಿತ್ತು. ಇದರ ಫಲವೇ ದುಂಡು ಮೇಜಿನ ಪರಿಷತ್ತಿನ ಸಮಾವೇಶಗಳು.

• 1929ರಲ್ಲಿ ಜವಾಹರಲಾಲ್ ನೆಹರೂರವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಅಧಿವೇಶನ ಲಾಹೋರ್ನಲ್ಲಿ ನಡೆಯಿತು. ಈ ಅಧಿವೇಶನದಲ್ಲಿ ‘ಸಂಪೂರ್ಣ ಸ್ವರಾಜ್ಯ’ ನಮ್ಮ ಗುರಿ ಎಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಘೋಷಿಸಿತು. ಜನವರಿ 26, 1930ರಂದು ಇಡೀ ದೇಶ ಸ್ವಾತಂತ್ರ್ಯ ದಿನವನ್ನು ಆಚರಿಸಿ ಲಾಹೋರ್ ಘೋಷಣೆಗೆ ಬೆಂಬಲ ಸೂಚಿಸಿತು.

• ಸಂಪೂರ್ಣ ಸ್ವರಾಜ್ಯದ ಗುರಿಯ ಸಾಧನೆಗಾಗಿ ಈ ಅಧಿವೇಶನವು ಬ್ರಿಟಿಷರ ವಿರುದ್ಧ ಹಮ್ಮಿಕೊಳ್ಳಲಾಗುವ ಕಾನೂನು ಭಂಗ ಚಳುವಳಿಯ ಪೂರ್ಣ ಜವಾಬ್ದಾರಿಯನ್ನು ಗಾಂಧೀಜಿಯವರಿಗೆ ವಹಿಸಿತು.

ಸವಿನಯ ಕಾನೂನು ಭಂಗ ಚಳುವಳಿ :
• ಕಾನೂನು ಭಂಗ ಚಳುವಳಿಯ ನೇತೃತ್ವ ವಹಿಸಿಕೊಂಡ ಗಾಂಧೀಜಿಯವರು ವೈಸರಾಯ್ ಇರ್ವಿನ್ನನ ಮುಂದೆ ಉಪ್ಪಿನ ಮೇಲಿನ ತೆರಿಗೆ ರದ್ದತಿಯು ಸೇರಿದಂತೆ ಹನ್ನೊಂದು ಬೇಡಿಕೆಗಳನ್ನು ಸಲ್ಲಿಸಿದ್ದರು.

• ಈ ಬೇಡಿಕೆಗಳು ಈಡೇರದೇ ಹೋದಲ್ಲಿ ಕಾನೂನು ಭಂಗ ಚಳುವಳಿ ಆರಂಭಿಸುವುದಾಗಿ ಗಾಂಧೀಜಿಯವರು ಘೋಷಿಸಿದರು. ಆದರೆ ಇರ್ವಿನ್ ಅವರ ಬೇಡಿಕೆಗಳನ್ನು ಪರಿಗಣಿಸಲಿಲ್ಲ.

• ಇದರ ಪರಿಣಾಮವಾಗಿ ಗಾಂಧೀಜಿಯವರು 1930ರಲ್ಲಿ ಸಬರಮತಿ ಆಶ್ರಮದಿಂದ ಸೂರತ್ ಸಮೀಪದ ಸಮುದ್ರ ತೀರದ ದಂಡಿಯವರೆಗೆ ತಮ್ಮ ಅನುಯಾಯಿಗಳೊಂದಿಗೆ ಕಾಲ್ನಡಿಗೆಯಲ್ಲಿ ಹೊರಟು ದಂಡಿಯ ಕಡಲ ತೀರದಲ್ಲಿ ತಾವೇ ಉಪ್ಪು ತಯಾರಿಸಿ ಕಾನೂನು ಭಂಗ ಚಳುವಳಿಯನ್ನು ಪ್ರಾರಂಭಿಸಿದರು.

• ಈ ಘಟನೆಯನ್ನು ಇತಿಹಾಸದಲ್ಲಿ ‘ದಂಡಿ ಸತ್ಯಾಗ್ರಹ’ ಎಂದು ಕರೆಯುತ್ತಾರೆ. ಉಪ್ಪಿನ ಸತ್ಯಾಗ್ರಹ ಕಾನೂನು ಭಂಗ ಚಳುವಳಿಯಲ್ಲಿ ಗಾಂಧೀಜಿಯವರೊಂದಿಗೆ ಭಾಗವಹಿಸಿದ್ದ ವಿಜಯಲಕ್ಷ್ಮಿ ಪಂಡಿತ್, ಕಮಲಾನೆಹರು, ವಲ್ಲಭ ಬಾಯಿ ಪಟೇಲ್, ರಾಜಗೋಪಾಲಚಾರಿ, ಬಾಬು ರಾಜೇಂದ್ರ ಪ್ರಸಾದ್ ಮೊದಲುಗೊಂಡು ಸಾವಿರಾರು ಜನರನ್ನು ಬ್ರಿಟಿಷರು ಬಂಧಿಸಿದರು.

• ಈ ಚಳುವಳಿಯು ದೇಶದ ನಾನಾಭಾಗಗಳಲ್ಲಿ ವ್ಯಾಪಿಸಿತು. ಇದರ ನಡುವೆ ಈ ಹಿಂದೆ ಪ್ರಸ್ತಾಪಿಸಿದಂತೆ ಲಂಡನ್ನಿನಲ್ಲಿ ಭಾರತೀಯ ಜನಪ್ರತಿನಿಧಿಯ ಸಮಾವೇಶವನ್ನು 1930ರಲ್ಲಿ ಕರೆಯಲಾಯಿತು. ಇದು ಮೊದಲನೆಯ ದುಂಡು ಮೇಜಿನ ಪರಿಷತ್ ಸಮಾವೇಶ.

• ಇದರಿಂದ ಭಾರತೀಯರನ್ನು ಹೊರತುಪಡಿಸಿ ಸರ್ಕಾರ ಏಕ ಮುಖವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲವೆಂಬುದು ವ್ಯಕ್ತವಾಯಿತು. ಈ ಸಮಾವೇಶದಲ್ಲಿ ಮೊಟ್ಟಮೊದಲನೆಯ ಬಾರಿಗೆ ಅಸ್ಪøಶ್ಯರನ್ನು ಪ್ರತ್ಯೇಕವಾಗಿ ಪ್ರತಿನಿಧಿಸುವ ಅವಕಾಶವನ್ನು ಕಲ್ಪಿಸಲಾಗಿತ್ತು.
• ಈ ಸಮಾವೇಶದಲ್ಲಿ ಭಾಗವಹಿಸಲು ಆ ಸಂದರ್ಭದಲ್ಲಿ ಬಂಧಿತರಾಗಿದ್ದ ಗಾಂಧೀಜಿ ಮತ್ತು ಹಲವು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಾಯಕರನ್ನು ಬಿಡುಗಡೆಗೊಳಿಸಲಾಯಿತು. ಆದರೆ ಕಾಂಗ್ರೆಸ್ ಮತ್ತು ಗಾಂಧೀಜಿಯವರು ಈ ಸಮಾವೇಶದಲ್ಲಿ ಭಾಗವಹಿಸಲು ನಿರಾಕರಿಸಿದರು.

• ಈ ಸಮಾವೇಶದಲ್ಲಿ ದೇಶೀಯ ಸಂಸ್ಥಾನದ ಪ್ರತಿನಿಧಿಗಳು, ವಿವಿಧ ಸಮುದಾಯದ ಮುಖಂಡರುಗಳಾಗಿದ್ದ ಡಾ. ಬಿ.ಆರ್.ಅಂಬೇಡ್ಕರ್, ಎಂ.ಆರ್. ಜಯಕರ್, ತೇಜಬಹದ್ದೂರ್ ಸಪ್ರು, ಮಹಮದ್ ಅಲಿ ಜಿನ್ನಾ, ಶ್ರೀನಿವಾಸ ಶಾಸ್ತ್ರಿ ಮೊದಲಾದವರು ಭಾಗವಹಿಸಿದ್ದರು.

• ಡೊಮಿನಿಯನ್ ಸ್ಟೇಟಸ್. ಜವಾಬ್ದಾರಿಯುತ ಸರ್ಕಾರ ಮತ್ತು ಮತೀಯ ಪ್ರಾತಿನಿದ್ಯಗಳನ್ನು ಕುರಿತಂತೆ ಈ ಸಮಾವೇಶದಲ್ಲಿ ಸಮ್ಮತಿಸಲಾಯಿತು.

• ಆದರೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮೊದಲನೆಯ ದುಂಡು ಮೇಜಿನ ಪರಿಷತ್ತಿನ ಸಮಾವೇಶದಲ್ಲಿ ಭಾಗವಹಿಸದ ಹಿನ್ನೆಲೆಯಲ್ಲಿ ಸಮಾವೇಶವು ಪೂರ್ಣಗೊಳ್ಳಲಿಲ್ಲ.

• ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಮನವೊಲಿಸಿ ದುಂಡು ಮೇಜಿನ ಸಮಾವೇಶದ ಉದ್ದೇಶವನ್ನು ಯಶಸ್ವಿಗೊಳಿಸುವ ದೃಷ್ಟಿಯಿಂದ ಗಾಂಧಿ ಮತ್ತು ವೈಸರಾಯ್ ಇರ್ವಿನ್ ನಡುವೆ ಒಪ್ಪಂದವೊಂದು ಮಾರ್ಚ್ 1931ರಲ್ಲಿ ಜರುಗಿತು.

• ಇದನ್ನು ಗಾಂಧೀ-ಇರ್ವಿನ್ ಒಪ್ಪಂದ ಎಂದು ಕರೆಯುತ್ತಾರೆ. ಪರಿಣಾಮವಾಗಿ ಕಾಂಗ್ರೆಸ್ ಪಕ್ಷವು ಸವಿನಯ ಕಾನೂನು ಭಂಗ ಚಳುವಳಿಯನ್ನು ನಿಲ್ಲಿಸಿ ಎರಡನೆಯ ದುಂಡುಮೇಜಿನ ಪರಿಷತ್ತಿನ ಸಮಾವೇಶದಲ್ಲಿ ಭಾಗವಹಿಸಲು ನಿರ್ಧರಿಸಿತು.

• ಮಹಮದ್ ಅಲಿ ಜಿನ್ನ ಮತ್ತು ಡಾ.ಬಿ.ಆರ್. ಅಂಬೇಡ್ಕರ್ರವರು ಈ ಸಭೆಯಲ್ಲಿ ಭಾಗವಹಿಸಿದ್ದರು. ಎರಡನೆಯ ದುಂಡು ಮೇಜಿನ ಸಮಾವೇಶದಲ್ಲಿ ಅಂಬೇಡ್ಕರ್ರವರು ಅಸ್ಪøಶ್ಯರಿಗೆ ಪ್ರತ್ಯೇಕ ಮತಕ್ಷೇತ್ರಗಳನ್ನು ನೀಡುವ ಪ್ರಸ್ತಾಪ ಮುಂದಿಟ್ಟರು.

• ಈ ಪ್ರಸ್ತಾಪವನ್ನು ಗಾಂಧೀಜಿಯವರು ಒಪ್ಪಲಿಲ್ಲ. ಇದರಿಂದ ಗಾಂಧೀಜಿ ಮತ್ತು ಅಂಬೇಡ್ಕರ್ರವರ ನಡುವೆ ತಾತ್ವಿಕ ಭಿನ್ನಾಭಿಪ್ರಾಯ ಉಂಟಾಯಿತು.
• ಹೀಗಾಗಿ ಎರಡನೆಯ ದುಂಡು ಮೇಜಿನ ಪರಿಷತ್ತು ಸಮಾವೇಶ ಕೂಡ ಯಾವುದೇ ತೀರ್ಮಾನವಿಲ್ಲದೆ ಮುಕ್ತಾಯಗೊಂಡಿತು.

• ಆದರೆ ಬ್ರಿಟಿಷ್ ಸರ್ಕಾರವು ಅಸ್ಪøಶ್ಯರನ್ನು ಪ್ರತ್ಯೇಕ ಮತಕ್ಷೇತ್ರವಾಗಿ ಪರಿಗಣಿಸುವುದಾಗಿ ಘೋಷಿಸಿತು. ಇದನ್ನು ವಿರೋಧಿಸಿ ಮಹಾತ್ಮ ಗಾಂಧೀಜಿಯವರು ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು.

• ಈ ಸಮಯದಲ್ಲಿ ಅಂಬೇಡ್ಕರ್ ಅವರ ಮನವೊಲಿಸುವ ಪ್ರಯತ್ನಗಳು ನಡೆದವು. ಇದರ ಫಲವಾಗಿ ಪೂನಾ ಒಪ್ಪಂದವಾಯಿತು. ಇದರ ಪ್ರಕಾರ ಪ್ರತ್ಯೇಕ ಮತಕ್ಷೇತ್ರದ ಬದಲಾಗಿ ಸಾಮಾನ್ಯ ಮತಕ್ಷೇತ್ರಗಳಲ್ಲಿಯೇ ಕೆಲವು ಕ್ಷೇತ್ರಗಳನ್ನು ಅಸ್ಪøಶ್ಯರಿಗೆ ಮೀಸಲಿಡಲಾಯಿತು.

• ಅಂತಹ ಕಡೆಗಳಲ್ಲಿ ಅಸ್ಪøಶ್ಯ ಪ್ರತಿನಿಧಿ ಎಲ್ಲಾ ಜನರ ಪ್ರತಿನಿಧಿಯಾಗಿರುತ್ತಿದ್ದರು. ಪ್ರತ್ಯೇಕ ಮತಕ್ಷೇತ್ರಕ್ಕೆ ಬದಲಾಗಿ ಕೆಲವು ಕ್ಷೇತ್ರಗಳು ಅಸ್ಪøಶ್ಯರಿಗಾಗಿ ಕಾದಿರಿಸಲ್ಪಟ್ಟವು.

• ಬ್ರಿಟಿಷ್ ಸರ್ಕಾರವು ಕೇಂದ್ರದಲ್ಲಿ ಒಕ್ಕೂಟ ಸ್ವರೂಪದ ಸರ್ಕಾರ, ರಾಜ್ಯಗಳಲ್ಲಿ ಪ್ರಾಂತೀಯ ಸರ್ಕಾರವನ್ನು ರಚಿಸಲು ಸೂಚಿಸಿತು. ಈ ಹಿನ್ನೆಲೆಯಲ್ಲಿ ಮೂರನೆಯ ದುಂಡು ಮೇಜಿನ ಪರಿಷತ್ತಿನ ಸಮಾವೇಶವನ್ನು 1932ರಲ್ಲಿ ಕರೆಯಿತು.

• ಸರ್ಕಾರವು ಪ್ರಸ್ತಾಪಿಸಿದ ವ್ಯವಸ್ಥೆಯನ್ನು ಧಿಕ್ಕರಿಸಿ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಲಿಲ್ಲ. ದುಂಡು ಮೇಜಿನ ಪರಿಷತ್ತುಗಳ ಪರಿಣಾಮವಾಗಿ ಬ್ರಿಟಿಷ್ ಸರ್ಕಾರವು 1935ರ ಭಾರತ ಸರ್ಕಾರ ಶಾಸನವನ್ನು ಜಾರಿಗೊಳಿಸಿತು. ಈ ಶಾಸನವು ಭಾರತ ಒಕ್ಕೂಟ ರಚನೆ ಮತ್ತು ಪ್ರಾಂತೀಯ ಸ್ವಾಯತ್ತತೆಯ ಅವಕಾಶಗಳನ್ನು ಕಲ್ಪಿಸಿತ್ತು.

• ಭಾರತೀಯರಿಗೆ ರಾಜಕೀಯ ಹಕ್ಕುಗಳು ದೊರೆತವು. ಇದರಿಂದಾಗಿ ಕಾಂಗ್ರೆಸ್ ಮತ್ತು ಮುಸ್ಲಿಂಲೀಗ್ ಚುನಾವಣೆಯಲ್ಲಿ ಸ್ಪರ್ಧಿಸಿದವು. ಕಾಂಗ್ರೆಸ್ ಬಹುಮತ ಪಡೆದು ಒಕ್ಕೂಟ ಸರ್ಕಾರವನ್ನು ರಚಿಸಿತು.

• ಈ ವೇಳೆಗೆ ಎರಡನೆಯ ಮಹಾಯುದ್ಧ ಆರಂಭಗೊಂಡಾಗ ಯುರೋಪಿನ ರಾಜಕೀಯ ವಿದ್ಯಮಾನಗಳ ಭಾಗವಾಗಿ ಭಾರತದ ವೈಸ್ರಾಯ್ ಏಕಪಕ್ಷೀಯವಾಗಿ ಭಾರತದ ಪರವಾಗಿ ಜರ್ಮನಿಯ ವಿರುದ್ಧ ಯುದ್ಧ ಘೋಷಿಸಿದನು.
• ಇದನ್ನು ಕಾಂಗ್ರೆಸ್ ಪ್ರತಿಭಟಿಸಿ ಮಂತ್ರಿ ಮಂಡಲದಿಂದ ಹೊರಬಂದಿತು. ವೈಸ್ರಾಯನ ತೀರ್ಮಾನವನ್ನು ವಿರೋಧಿಸಿ ಗಾಂಧೀಜಿ ವೈಯಕ್ತಿಕ ಸತ್ಯಾಗ್ರಹ ಸಾರಿದರು. ಆಗ ಭಾರತೀಯರನ್ನು ತೃಪ್ತಿ ಪಡಿಸಲು ಸ್ಟ್ರಾಫರ್ಡ ಕ್ರಿಪ್ಸ್ ಅವರನ್ನು ಸಂಧಾನಕ್ಕಾಗಿ ಕಳುಹಿಸಲಾಯಿತು.

ಕ್ವಿಟ್ ಇಂಡಿಯಾ ಚಳುವಳಿ (1942)
• ಬ್ರಿಟಿಷ್ ಸರ್ಕಾರವು ಭಾರತೀಯ ನಾಯಕರೊಂದಿಗೆ ಸಂಧಾನಕ್ಕಾಗಿ ಕಳುಹಿಸಿದ್ದ ಸ್ಟ್ರಾಫರ್ಡ್ ಕ್ರಿಪ್ಸ್ ಆಯೋಗವು 1942ರಲ್ಲಿ ಕೆಲವು ಸಲಹೆಗಳನ್ನು ಭಾರತೀಯರ ಮುಂದಿಟ್ಟಿತು. ಈ ಆಯೋಗವು ಭಾರತಕ್ಕೆ ಡೊಮಿನಿಯನ್ ಸ್ಥಾನಮಾನ ನೀಡುವುದು, ಅದಕ್ಕಾಗಿ ಸಂವಿಧಾನ ರಚಿಸಲು ಸಭೆ ಕರೆಯುವುದು, ಹೊಸ ಸಂವಿಧಾನದಲ್ಲಿ ಭಾರತ ಒಕ್ಕೂಟವನ್ನು ಸೇರುವ ಅಥವಾ ಬಿಡುವ ಸ್ವಾತಂತ್ರ್ಯವನ್ನು ಸಂಬಂಧಿಸಿದ ರಾಜ್ಯಗಳಿಗೆ ಬಿಡುವಂತಹ ಸಲಹೆಗಳನ್ನು ನೀಡಿತು.
• ಈ ಸಲಹೆಗಳನ್ನು ಕಾಂಗ್ರೆಸ್ ಒಪ್ಪದೆ ಕ್ವಿಟ್ ಇಂಡಿಯಾ ಚಳುವಳಿಗೆ ಕರೆ ನೀಡಿತು. ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಎನ್ನುವುದು ಕ್ವಿಟ್ ಇಂಡಿಯಾ ಚಳುವಳಿಯ ಆಶಯವಾಗಿತ್ತು.ಕ್ವಿಟ್ ಇಂಡಿಯಾ ಚಳುವಳಿ ಗಾಂಧೀಜಿಯವರು ದೇಶಬಾಂಧವರಿಗೆ ‘ಮಾಡು ಇಲ್ಲವೇ ಮಡಿ’ ಎನ್ನುವ ಕರೆ ನೀಡಿದರು.

• ಈ ಕರೆ ನೀಡಿದ ಹಿನ್ನೆಲೆಯಲ್ಲಿ ಗಾಂಧೀಜಿ, ನೆಹರು, ರಾಜೇಂದ್ರಪ್ರಸಾದ್, ಅಬುಲ್ ಕಲಾಂ ಅಜಾದ್, ಸರ್ದಾರ್ ವಲ್ಲಭ ಭಾಯಿ ಪಟೇಲ್, ಆಚಾರ್ಯ ಕೃಪಲಾನಿ, ಕಸ್ತೂರಬಾ ಗಾಂಧಿ ಮೊದಲಾದ ನಾಯಕರನ್ನು ಬ್ರಿಟಿಷ್ ಸರ್ಕಾರವು ಬಂಧಿಸಿ ಜೈಲಿನಲ್ಲಿಟ್ಟಿತು.

• ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಬಹುತೇಕ ನಾಯಕರು ಬಂಧನದಲ್ಲಿದ್ದ ಕಾರಣ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸೇತರ ಸಂಘಟನೆಗಳು ಮುಖ್ಯ ಭೂಮಿಕೆಯಲ್ಲಿದ್ದವು. ಹೊಸನಾಯಕರುಗಳ ಉದಯಕ್ಕೆ ಈ ಹೋರಾಟವು ಎಡೆ ಮಾಡಿಕೊಟ್ಟಿತು.

• ಈ ಸಂದರ್ಭದಲ್ಲಿ ಚಳುವಳಿಯ ನೇತೃತ್ವವನ್ನು ಜಯಪ್ರಕಾಶ್ ನಾರಾಯಣರವರು ವಹಿಸಿಕೊಂಡರು. ಇವರು ಕಾಂಗ್ರೆಸ್ನ ಸಮಾಜವಾದಿ ಬಣದ ಪ್ರಮುಖ ನಾಯಕರಾಗಿದ್ದರು. ಇವರು ತಮ್ಮ ಬೆಂಬಲಿಗರೊಡನೆ ದೇಶದ ವಿವಿಧೆಡೆಯಲ್ಲಿ ಕ್ರಾಂತಿಕಾರಕ ಚಟುವಟಿಕೆಗಳಲ್ಲಿ ತೊಡಗಿದರು.

• ಸಮಾಜವಾದಿಗಳು ‘ದಿ ಫ್ರೀಡಂ ಸ್ಟ್ರಗಲ್ ಫ್ರಾಂಟ್’ ಎಂಬ ದಾಖಲೆ (Document) ಮೂಲಕ ತಮ್ಮ ಕಾರ್ಯತಂತ್ರವನ್ನು ಅನುಷ್ಠಾನಕ್ಕೆ ತಂದರು. ಈ ಮೂಲಕ ಅವರು ಕಾರ್ಮಿಕರಿಗೆ ತರಬೇತಿಯನ್ನು ನೀಡಿದರು. ಜನತೆಗೆ ಹೋರಾಟದಲ್ಲಿ ಭಾಗವಹಿಸಲು ಕರೆಯನ್ನಿತ್ತರು.

• ಹಣವನ್ನು ಕ್ರೂಢೀಕರಿಸಿದರು. ಈ ಮೂಲಕವಾಗಿ ದಿಕ್ಕೆಟ್ಟ ಹೋರಾಟಕ್ಕೆ ದಿಕ್ಕು ಕೊಟ್ಟವರು ಇವರೇ. ಕುತೂಹಲದ ಸಂಗತಿಯೆಂದರೆ ಇದೇ ಸಂದರ್ಭದಲ್ಲಿ ಭಾರತದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟವು ಭಾರತದ ಗಡಿಯ ಹೊರಗೂ ಪ್ರಾರಂಭವಾಯಿತು.

• ಈ ದಿಸೆಯಲ್ಲಿ ಸುಭಾಷ್ ಚಂದ್ರ ಬೋಸರವರ ಪ್ರಯತ್ನ ಅದ್ವಿತೀಯವಾದದ್ದು. 1937ರ ಚುನಾವಣೆಗಳ ನಂತರ ಸರ್ಕಾರದ ಪಾಲ್ಗೊಳ್ಳುವಿಕೆಯಲ್ಲಿ ಮುಸ್ಲಿಂ ಲೀಗನ್ನು ಸರ್ಕಾರ ರಚನೆಯಿಂದ ಕೈಬಿಡಲಾಗಿತ್ತು.

• 1939ರಲ್ಲಿ ಭಾರತ ಸರ್ಕಾರವು ಏಕಮುಖವಾಗಿ ಎರಡನೆಯ ಮಹಾಯುದ್ಧಕ್ಕೆ ಭಾರತವನ್ನು ಭಾಗಿ ಮಾಡಿದ ಸಂದರ್ಭದಲ್ಲಿ ಮಂತ್ರಿಮಂಡಲದಲ್ಲಿದ್ದ ಕಾಂಗ್ರೆಸಿಗರೆಲ್ಲರು ಹೊರಬಂದಾಗ ಮುಸ್ಲಿಂ ಲೀಗ್ ‘ವಿಮುಕ್ತಿ ದಿವಸ’ವನ್ನು ಆಚರಿಸಿತು.

• ಹೀಗಾಗಿ ಮುಸ್ಲಿಂ ಲೀಗ್ ಭಾರತ ಬಿಟ್ಟು ತೊಲಗಿ ಆಂದೋಲನದಲ್ಲಿ ಭಾಗವಹಿಸಲಿಲ್ಲ. ಅದು ಭಾರತದ ವಿಭಜನೆಯ ಪ್ರಸ್ತಾಪವನ್ನು ಮುಂದಿಟ್ಟಿತು.

• ರೈತರು ಮತ್ತು ಕಾರ್ಮಿಕರ ಪ್ರತಿಭಟನೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ರೈತ ಕಾರ್ಮಿಕ ಸಂಘಟನೆಗಳ ಪ್ರತಿಭಟನೆಗಳು ಕೂಡಾ ಪ್ರಮುಖವಾಗಿವೆ.

• ಈ ಸಂಘಟನೆಗಳಲ್ಲಿ ಕೆಲವು ರಾಷ್ಟ್ರೀಯ ಕಾಂಗ್ರೆಸ್ನಿಂದ ಪ್ರಭಾವಿತವಾಗಿದ್ದರೆ, ಇನ್ನು ಕೆಲವು ಸಂಘಟನೆಗಳು ಮಾಕ್ರ್ಸ್ವಾದದಿಂದ ಪ್ರಭಾವಿತವಾಗಿದ್ದವು. ಬ್ರಿಟಿಷ್ ಆಡಳಿತದ ಅವಧಿಯಲ್ಲಿ ಜಮೀನ್ದಾರರು ಮತ್ತು ಯುರೋಪಿಯನ್ ಪ್ಲಾಂಟರ್ಗಳ ವಿರುದ್ಧ ರೈತರು ಹಲವಾರು ಕಡೆ ದಂಗೆ ನಡೆಸಿದರು.

• ಚಂಪಾರಣ್ಯ ಜಿಲ್ಲೆಯಲ್ಲಿ ನೀಲಿ ಬೆಳೆಯುವುದನ್ನು ವಿರೋಧಿಸಿದರು. ಭೂಕಂದಾಯದ ವಿರುದ್ಧ ಹರತಾಳ ನಡೆಸಿದರು. ಗಾಂಧೀಜಿಯವರು ಸತ್ಯಾಗ್ರಹದ ಮೂಲಕ ಬ್ರಿಟಿಷ್ ಅಧಿಕಾರಿಗಳ ಮನವೊಲಿಸಿ ತೆರಿಗೆ ರದ್ದುಗೊಳಿಸಿದರು.

• ರಾಷ್ಟ್ರೀಯ ಹೋರಾಟದ ಭಾಗವಾಗಿ ರೈತರನ್ನು ಸಂಘಟಿಸುವ ಪ್ರಯತ್ನವನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮಾಡಿತು. ಚಂಪಾರಣ್ಯ, ಖೇಡಾ, ಮೊದಲಾದ ಪ್ರದೇಶಗಳ ರೈತರ ಕಾರ್ಯ ಚಟುವಟಿಕೆಗಳಲ್ಲಿ ಗಾಂಧೀಜಿಯವರ ಪ್ರಭಾವವಿತ್ತು.

• ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರಭಾವದಿಂದ ತೇಭಾಗ, ಮಲಬಾರ್ ಮೊದಲಾದೆಡೆ ಶೋಷಣೆಗೊಳಗಾಗಿದ್ದ ರೈತರು ತೀವ್ರವಾಗಿ ಜಮೀನ್ದಾರರು ಹಾಗೂ ಬ್ರಿಟಿಷರ ವಿರುದ್ಧ ಬಂಡೆದ್ದರು. ಅಸಹಕಾರ ಆಂದೋಲನ, ಕರ ನಿರಾಕರಣೆ, ಕ್ವಿಟ್ ಇಂಡಿಯಾ ಚಳುವಳಿಗಳಲ್ಲಿ ರೈತರ ಸಮಸ್ಯೆಗಳು ಬೆರೆತವು.

• ಹಲವಾರು ಹೋರಾಟಗಳು ಎಡಪಂಥೀಯ ವಿಚಾರಧಾರೆಗಳಿಂದ ರಚನೆಗೊಂಡ ಕಿಸಾನ್ ಸಭಾದಡಿಯಲ್ಲಿ ಸಂಘಟಿತವಾದವು. ಹೋರಾಟಗಳು ಕೆಲವೊಮ್ಮೆ ಕಾಂಗ್ರೆಸ್ನೊಂದಿಗೆ ಮತ್ತು ಕೆಲವೊಮ್ಮೆ ಕಾಂಗ್ರೆಸ್ ವಿರುದ್ಧವಾದ ನಿಲುವನ್ನು ಹೆÇಂದುತ್ತಿದ್ದವು.

• ತೆಲಂಗಾಣದ ರೈತ ಹೋರಾಟವು ಜಮೀನ್ದಾರರು ಹಾಗೂ ನಿಜಾಮನ ರಜಾಕರ ವಿರುದ್ಧ ಪ್ರತಿಭಟಿಸಿತು. ಬಂಗಾಳದ ರೈತರು ಜಮೀನ್ದಾರರ ಶೋಷಣೆ ವಿರುದ್ಧ ದಂಗೆ ಎದ್ದರು. ಮಹಾರಾಷ್ಟ್ರದಲ್ಲಿ ರೈತರು ಕಡಿಮೆ ಕೂಲಿ ವಿರುದ್ಧ ಚಳುವಳಿ ನಡೆಸಿದರು.

ಕಾರ್ಮಿಕ ಬಂಡಾಯ
• ಕಾರ್ಮಿಕರ ಹೋರಾಟವು 1827ರಲ್ಲಿ ಕಲ್ಕತ್ತದಲ್ಲಿ ಆರಂಭವಾಯಿತು. ಸೆಣಬು, ಬಟ್ಟೆಗಿರಣಿ ಕಾರ್ಮಿಕರು, ರೈಲ್ವೆ ಕೂಲಿಗಳು ತಮ್ಮ ಬೇಡಿಕೆಗಳಿಗಾಗಿ ಸಂಘಟಿತರಾಗತೊಡಗಿದರು.

• ರೈಲ್ವೆ ಕೂಲಿಗಳು ನಿಲ್ದಾಣದಲ್ಲಿ ಮುಷ್ಕರ ನಡೆಸಿ ಹೆಚ್ಚಿನ ಕೂಲಿಗಾಗಿ ಬ್ರಿಟಿಷ್ ಅಧಿಕಾರಿಗಳ ವಿರುದ್ದ ಘೋಷಣೆಗಳನ್ನು ಕೂಗಿದರು.

• ಕಲ್ಕತ್ತದಲ್ಲಿ ಪ್ರಿಂಟರ್ಸ್ ಯೂನಿಯನ್ನವರು ಮತ್ತು ಬಾಂಬೆ ಬಟ್ಟೆ ಗಿರಣಿಯ ಕಾರ್ಮಿಕರು ರಾಷ್ಟ್ರೀಯ ಜಾಗೃತಿ ಉಂಟು ಮಾಡಿದರು. ಮದ್ರಾಸ್ನಲ್ಲಿ ಲೇಬರ್ ಯೂನಿಯನ್ ಸ್ಥಾಪನೆಗೊಂಡಿತು.

• ನಂತರದಲ್ಲಿ ಕಾರ್ಮಿಕ ಸಂಘಟನೆಗಳು ಸ್ಥಾಪನೆಗೊಂಡವು. ಕಾಂಗ್ರೆಸ್, ಕಾರ್ಮಿಕ ಸಂಘಟನೆಗಳ ಇಂತಹ ಚಳುವಳಿಗೆ ಬೆಂಬಲ ನೀಡಿತು.

• ಬುಡಕಟ್ಟು ಬಂಡಾಯಗಳು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಆಳ್ವಿಕೆಯಲ್ಲಿ ಜಾರಿಗೆ ತಂದ ಕಂದಾಯ ಮತ್ತು ಅರಣ್ಯ ನೀತಿಗಳು ಬುಡಕಟ್ಟು ದಂಗೆಗೆ ನೇರವಾಗಿ ಪ್ರೇರಣೆಯಾದವು.

• ಬುಡಕಟ್ಟು ಬಂಡಾಯಗಳಲ್ಲಿ ಸಂತಾಲರ ದಂಗೆ, ಮುಂಡ ಚಳುವಳಿ ಪ್ರಮುಖವಾಗಿವೆ. ಕರ್ನಾಟಕದಲ್ಲಿ ಹಲಗಲಿಯ ಬೇಡರ ಬಂಡಾಯವು ಈ ನಿಟ್ಟಿನಲ್ಲಿ ಗಮನಾರ್ಹವಾಗಿದೆ.

• ಸಂತಾಲ ಬುಡಕಟ್ಟು ದಂಗೆಯನ್ನು ಭಾರತದ ಆದ್ಯ ಹೋರಾಟ ಎಂದು ಗುರುತಿಸಲಾಗಿದೆ. ಈ ಬುಡಕಟ್ಟು ಜನರನ್ನು ಬಂಗಾಳಿ ಮತ್ತು ಒರಿಸ್ಸಾದ ಗುಡ್ಡಗಾಡು ಪ್ರದೇಶಗಳಲ್ಲಿ ಗುರುತಿಸಬಹುದು. ಬ್ರಿಟಿಷರು ಜಾರಿಗೆ ತಂದ ಖಾಯಂ ಜಮೀನ್ದಾರಿ ಪದ್ಧತಿಯಿಂದ ಈ ಬುಡಕಟ್ಟು ಜನರು ನಿರ್ಗತಿಕರಾದರು.
• ಬುಡಕಟ್ಟು ಜನರ ಭೂಮಿಯು ಜಮೀನ್ದಾರರ ಕೈಸೇರಿತು. ಬಂಗಾಳಿ ಜಮೀನ್ದಾರರು, ಲೇವಾದೇವಿಗಾರರು ಮತ್ತು ಕಂಪನಿ ಸರ್ಕಾರವು ಸಂತಾಲರ ನೇರ ಶೋಷಣೆಗೆ ಕಾರಣರಾದರು. ಸಂತಾಲರ ಶಾಂತಿ ಪ್ರಿಯತೆ ಮತ್ತು ಸಭ್ಯತೆಯನ್ನು ಕಂಪನಿ ಸರ್ಕಾರವು ಶೋಷಣೆಗೆ ಉಪಯೋಗಿಸಿಕೊಂಡಿತು.
• ಇದರಿಂದ ಅಸಮಾಧಾನಗೊಂಡ ಸಂತಾಲರು ರಹಸ್ಯ ಸಭೆಗಳನ್ನು ನಡೆಸಿ ಜಮೀನ್ದಾರರು ಮತ್ತು ಮಹಾಜನರನ್ನು ಲೂಟಿ ಮಾಡಲು ನಿರ್ಧರಿಸಿದರು. ದಂಗೆಯು ಬಾರಹತ್, ಬಾಗತಪುರ್ ಮತ್ತು ರಾಜಮಹಲ್ಗಳಲ್ಲಿ ತೀವ್ರವಾಯಿತು.

• ಪರಿಣಾಮವಾಗಿ ಬುಡಕಟ್ಟು ಜನರು ಅವರ ಶತ್ರುಗಳನ್ನು ಹತ್ಯೆ ಮಾಡಿದರು. ಇದರಿಂದಾಗಿ ಜಮೀನ್ದಾರರು, ಲೇವಾದೇವಿದಾರರು ಪಲಾಯನ ಮಾಡಿದರು. ಸಂತಾಲರ ದಂಗೆಯನ್ನು ಹತ್ತಿಕ್ಕಲು

• ಬ್ರಿಟಿಷರು ಸೈನ್ಯವನ್ನು ಬಳಸಿಕೊಂಡರು. ಸಂತಾಲರ ದಂಗೆಯು ಕೊನೆಗೊಂಡರೂ ಅದರ ಸ್ಪೂರ್ತಿಯು ಮುಂದಿನ ಅನೇಕ ಹೋರಾಟಗಳಿಗೆ ಪ್ರೇರಣೆಯಾಯಿತು.

ಸುಭಾಷ್ ಚಂದ್ರ ಬೋಸ್
• ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಸುಭಾಷ್ ಚಂದ್ರ ಬೋಸರ ಪಾತ್ರವು ಒಂದು ದಿಟ್ಟ ಮೈಲಿಗಲ್ಲು. ಭಾರತೀಯ ನಾಗರಿಕ ಸೇವಾ ಪರೀಕ್ಷೆಯಲ್ಲಿ (ICS) ನಾಲ್ಕನೇ ರ್ಯಾಂಕ್ ಗಳಿಸಿದ್ದರೂ, ದೇಶಾಭಿಮಾನದಿಂದಾಗಿ ಬ್ರಿಟಿಷ್ ಸರ್ಕಾರದ ಪ್ರತಿಷ್ಠಿತ ಹುದ್ದೆಯನ್ನು ತ್ಯಜಿಸಿ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದರು. ಇವರು ‘ನೇತಾಜಿ’ ಎಂದು ಜನಪ್ರಿಯರಾದರು.

• ಗಾಂಧೀಜಿಯವರ ಸೌಮ್ಯ ಹೋರಾಟಕ್ಕೆ ಪರ್ಯಾಯವಾಗಿ 30ರ ದಶಕದ ಪ್ರಾರಂಭದಲ್ಲಿ ವಿದೇಶದಲ್ಲಿ ನೆಲೆಗೊಂಡ ಭಾರತೀಯರನ್ನು ಸಂಘಟಿಸಿ ಬ್ರಿಟಿಷರ ವಿರುದ್ಧ ಹೋರಾಡುವ ಪ್ರಯತ್ನದಲ್ಲಿದ್ದರು. ಇವರು ವಿವಿಧ ದೇಶಗಳ ನಗರಗಳಾದ ವಿಯನ್ನಾ, ಬರ್ಲಿನ್, ರೋಮ್, ಇಸ್ತಾಂಬುಲ್ ಮುಂತಾದ ಕಡೆಗಳಲ್ಲಿ ಪ್ರವಾಸ ಬೆಳೆಸಿ ತಾಯ್ನಾಡಿಗೆ ತಮ್ಮ ಬೆಂಬಲವನ್ನು ನೀಡಲು ಪ್ರೇರೇಪಿಸಿದರು.

• ಯುರೋಪಿನಲ್ಲಿ ಉದಯಿಸಿದ ಕಮ್ಯೂನಿಸ್ಟ್ ಮತ್ತು ಸಮಾಜವಾದಿ ಅಲೆಯು ಭಾರತದಲ್ಲಿ ಕಾಂಗ್ರೆಸ್ ಸಂಘಟನೆಯನ್ನೂ ಕೂಡಾ ಬದಲಾವಣೆಗೆ ಒಳಪಡಿಸಿತು. ಕಾಂಗ್ರೆಸ್ನ ಒಳಗೂ ಸಹ ಸ್ಪಷ್ಟವಾಗಿ ಸಮಾಜವಾದಿ ಎಡಪಂಥೀಯತೆ ಗೋಚರಿಸತೊಡಗಿತು.

• ಈ ಹಿನ್ನೆಲೆಯಲ್ಲಿ ಭಾರತದಲ್ಲಿ 1934ರ ವೇಳೆಗೆ ಜವಾಹರಲಾಲ್ ನೆಹರು ಮತ್ತು ಸುಭಾಷ್ ಚಂದ್ರಬೋಸರು ಕಾಂಗ್ರೆಸ್ ಸಮಾಜವಾದಿ ಪಕ್ಷವನ್ನು ಸ್ಥಾಪಿಸಿದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಹರಿಪುರ ಅಧಿವೇಶನದಲ್ಲಿ ಗಾಂಧೀಜಿ ಬೆಂಬಲದೊಂದಿಗೆ ಬೋಸರು ಅಧ್ಯಕ್ಷರಾದರು.

• ಬ್ರಿಟಿಷರ ಯುದ್ಧ ನೀತಿ ತಯಾರಿಗೆ ಸುಭಾಷ್ ಚಂದ್ರ ಬೋಸ್ ಸಂಬಂಧಿಸಿದಂತೆ ಮೃದು ದೋರಣೆಯನ್ನು ಹೊಂದಿದ್ದ ಗಾಂಧೀಜಿ ಮತ್ತು ಬ್ರಿಟಿಷರ ವಿರುದ್ಧ ಕಠಿಣ ದೋರಣೆ ಹೊಂದಿದ್ದ ಸುಭಾಷರ ನಡುವೆÀ ಬಾಂಧವ್ಯದಲ್ಲಿ ಬಿರುಕು ಮೂಡಿತು.

• ಗಾಂಧೀಜಿಯವರು ಅಂತರರಾಷ್ಟ್ರೀಯ ನೆರವನ್ನು ಈ ಸಂದರ್ಭದಲ್ಲಿ ಕೋರದೇ ಇದ್ದದ್ದನ್ನು ಆಕ್ಷೇಪಿಸಿದರು. 1938ರ ಕಾಂಗ್ರೆಸ್ನ ತ್ರಿಪುರ ಅಧಿವೇಶನದಲ್ಲಿ ಸುಭಾಷ್ ಚಂದ್ರಬೋಸರು ಗಾಂಧೀಜಿಯವರ ವಿರೋಧದ ನಡುವೆಯೂ ಕಾಂಗ್ರೆಸ್ನ ಅಧ್ಯಕ್ಷರಾಗಿ ಆಯ್ಕೆಗೊಂಡರು. ನಂತರದ ದಿನಗಳಲ್ಲಿ ಗಾಂಧೀಜಿ ಮತ್ತು ಬೋಸರ ಭಿನ್ನಾಭಿಪ್ರಾಯಗಳು ತೀವ್ರಗೊಂಡವು.

• ಕಾಂಗ್ರೆಸ್ನ ಒಳಗಿದ್ದು ಬ್ರಿಟಿಷರನ್ನು ತೀವ್ರವಾಗಿ ಹಿಮ್ಮೆಟ್ಟಿಸ ಬೇಕೆನ್ನುವ ಸುಭಾಷ್ ಚಂದ್ರ ಬೋಸ್ರವರ ಕಾರ್ಯ ಚಟುವಟಿಕೆಗೆ ಹಿನ್ನಡೆಯುಂಟಾಯಿತು.

• ಸುಭಾಷ್ ಚಂದ್ರ ಬೋಸರು ಕಾಂಗ್ರೆಸ್ನ ಚಟುವಟಿಕೆಗಳು ಮತ್ತು ಗಾಂಧೀಜಿಯವರ ಕಾರ್ಯವಿಧಾನದಿಂದ ಬೇಸರಗೊಂಡು ಕಾಂಗ್ರೆಸ್ನಿಂದ ಹೊರಬಂದು ‘ಫಾರ್ವರ್ಡ್ ಬ್ಲಾಕ್’ ಎಂಬ ಹೊಸ ಪಕ್ಷವನ್ನು ಕಟ್ಟಿದರು. ಇದು ಕಾಂಗ್ರೆಸ್ನ ಒಳಗೆ ಇದ್ದು, ಪ್ರಗತಿಪರ ಮತ್ತು ತೀವ್ರತರ ಆಶಯಗಳನ್ನು ಹೊಂದಿತ್ತು.

• ಬ್ರಿಟಿಷರ ಯುದ್ಧ ತಯಾರಿಯನ್ನು ಹಾಗೂ ಜಾಗತಿಕ ಯುದ್ಧದಲ್ಲಿ ಭಾರತದ ಪಾಲ್ಗೊಳುವಿಕೆಯನ್ನು ಸುಭಾಷರು ವಿರೋಧಿಸಿದರು. ಪರಿಣಾಮವಾಗಿ ಬ್ರಿಟಿಷ್ ಸರ್ಕಾರವು ಸುಭಾಷ್ ಚಂದ್ರಬೋಸರವರನ್ನು ಬಂಧಿಸಿತು. ಬ್ರಿಟಿಷ್ ವಿರೋಧಿ ಶಕ್ತಿಗಳೊಡಗೂಡಿ ಬ್ರಿಟಿಷರ ವಿರುದ್ಧ ಹೋರಾಡಲು ಬಯಸಿ ಅವರು ಗೃಹಬಂಧನದಿಂದ ತಪ್ಪಿಸಿಕೊಂಡು ಜರ್ಮನಿಗೆ ತೆರಳಿದರು. ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಇವರಿಗೆ ಎಲ್ಲಾ ಸಹಾಯವನ್ನು ನೀಡುವ ಭರವಸೆಯನ್ನು ವ್ಯಕ್ತಪಡಿಸಿದನು.

• ಬೋಸರು ಜರ್ಮನಿಯಲ್ಲಿ ಭಾರತೀಯ ಯುದ್ಧ ಕೈದಿಗಳನ್ನು ಸಂಘಟಿಸಿದರು. ‘ಅಜಾದ್ ಹಿಂದ್ ರೇಡಿಯೋ’ ಮೂಲಕ ತಮ್ಮ ಭಾಷಣಗಳನ್ನು ಭಾರತೀಯರಿಗೆ ಪ್ರಸರಣ ಮಾಡಿದರು.

• ಯುದ್ಧದಲ್ಲಿ ಜಪಾನಿನ ಯಶಸ್ಸನ್ನು ತಿಳಿದು ಅದರ ಸಹಾಯದಿಂದ ಭಾರತದ ಬಿಡುಗಡೆಯ ಸಾಧ್ಯತೆಗೆ ಸಂಬಂಧಿಸಿದಂತೆ ಭಾರತೀಯರನ್ನು ಸಂಘಟಿಸಿದ್ದ ರಾಸ್ ಬಿಹಾರಿ ಬೋಸರ ಜೊತೆಗೆ ಸುಭಾಷರು ಕೈಜೋಡಿಸಿದರು.

• ರಾಸ್ ಬಿಹಾರಿ ಬೋಸರವರು ಟೋಕಿಯೋದಲ್ಲಿ ಸ್ಥಾಪಿಸಿದ ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ನ ಸೇನಾವಿಭಾಗವನ್ನು ಭಾರತೀಯ ರಾಷ್ಟ್ರೀಯ ಸೇನೆ (INA) ಎಂದು ಕರೆಯುತ್ತಿದ್ದರು.

• ನಂತರದ ದಿನಗಳಲ್ಲಿ ಐ.ಎನ್.ಎ ಯ ಮುಖಂಡತ್ವವನ್ನು ಸುಭಾಷ್ ಚಂದ್ರ ಬೋಸರವರಿಗೆ ವಹಿಸಿದರು. ಸುಭಾಷ್ ಚಂದ್ರ ಬೋಸರು ಈ ಸಂದರ್ಭದಲ್ಲಿ ‘ದೆಹಲಿ ಚಲೋ’ಗೆ ಕರೆಯನ್ನು ನೀಡಿದರು.

• ‘ನನಗೆ ರಕ್ತಕೊಡಿ, ನಾನು ನಿಮಗೆ ಸ್ವಾತಂತ್ರ್ಯ ನೀಡಲು ಪ್ರಮಾಣಿಸುತ್ತೇನೆ’ ಎಂಬ ಕರೆಯನ್ನಿತ್ತರು. ಭಾರತೀಯ ರಾಷ್ಟ್ರೀಯ ಸೇನೆಯಲ್ಲಿ ಝಾನ್ಸಿ ರೆಜಿಮೆಂಟ್ ಎಂಬ ವಿಭಾಗವೂ ಇತ್ತು. ಕ್ಯಾಪ್ಟನ್ ಲಕ್ಷ್ಮಿ ಈ ರೆಜಿಮೆಂಟಿನ ನೇತೃತ್ವವನ್ನು ವಹಿಸಿದ್ದರು.

• ಸುಭಾಷರು ರಂಗೂನಿನ ಮೂಲಕ ಬ್ರಿಟಿಷರ ಕೈಯಲ್ಲಿದ್ದ ದೆಹಲಿಯನ್ನು ವಶಪಡಿಸಿಕೊಳ್ಳಲು ಯುದ್ಧ ತಂತ್ರವನ್ನು ರೂಪಿಸಿದ್ದರು. ಆ ಹೊತ್ತಿಗೆ ಭಾರತದಿಂದ ಐ.ಎನ್.ಎ ಗೆ ಸೇರ್ಪಡೆಯಾದ ಸಾವಿರಾರು ಯೋಧರು ದೆಹಲಿಯನ್ನು ಆಕ್ರಮಿಸಲು ತಯಾರಿ ನಡೆಸಿದ್ದರು.

• ಈ ಹಿನ್ನೆಲೆಯಲ್ಲಿ ಸುಭಾಷರ ಆದೇಶದಂತೆ ಸಶಸ್ತ್ರ ಹೋರಾಟವನ್ನು ಅವರು ಬರ್ಮಾದ ಗಡಿಯಲ್ಲಿ ಆರಂಭಿಸಿದರು. ಬ್ರಿಟಿಷರು ಮತ್ತು ಐ.ಎನ್.ಎ ನಡುವೆ ತೀವ್ರವಾದಂತಹ ಯುದ್ಧ ನಡೆದ್ದಿದ್ದ ಸಂದರ್ಭದಲ್ಲಿ ಸುಭಾಷರು ಆಕಸ್ಮಿಕವಾಗಿ ವಿಮಾನ ಅಪಘಾತದಲ್ಲಿ ಮಡಿದರು.

• ಬರ್ಮಾದ ರಾಜಾಧಾನಿ ರಂಗೂನ್ ಬ್ರಿಟಿಷರ ವಶವಾದ್ದರಿಂದ ಐ.ಎನ್.ಎ ಸೈನಿಕರನ್ನು ಬ್ರಿಟಿಷರು ಬಂಧಿಸಿದರು. ನಂತರದ ದಿನಗಳಲ್ಲಿ ಗಾಂಧೀಜಿಯವರು ಸೇರಿದಂತೆ ಕಾಂಗ್ರೆಸ್ನ ಬಹುತೇಕ ನಾಯಕರೆಲ್ಲರೂ ಐ.ಎನ್.ಎ ಸೈನಿಕರನ್ನು ಬಂಧಮುಕ್ತ ಮಾಡುವಲ್ಲಿ ಶ್ರಮಿಸಿದರು.

ಡಾ. ಬಿ.ಆರ್. ಅಂಬೇಡ್ಕರ್ :
• ಸಾಮಾಜಿಕ ಸ್ವಾತಂತ್ರ್ಯವಿಲ್ಲದ ರಾಜಕೀಯ ಸ್ವಾತಂತ್ರ್ಯವು ಅರ್ಥಹೀನ ಎಂದು ಡಾ. ಬಿ.ಆರ್. ಅಂಬೇಡ್ಕರ್ರವರು ಬಲವಾಗಿ ನಂಬಿದ್ದರು. ಭಾರತದ ಶ್ರೇಣೀಕೃತ ವ್ಯವಸ್ಥೆಯಲ್ಲಿರುವ ಕಟ್ಟಕಡೆಯ ಮನುಷ್ಯನಿಗೆ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ದೊರೆಯದ್ದಿದರೆ ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥವಿಲ್ಲ; ಅದು ಕೇವಲ ಮರಿಚೀಕೆಯಾಗಿ ಉಳಿಯುತ್ತದೆ ಎಂದು ಅಂಬೇಡ್ಕರ್ರವರು ತಿಳಿದಿದ್ದರು.

• ಅವರು ಭಾರತವನ್ನು ಕೇವಲ ಒಂದು ರಾಜಕೀಯ ಪರಿಕಲ್ಪನೆಯಾಗಿ ಕಾಣದೆ ಅದರ ಭಾವನಾತ್ಮಕ ಮುಖವನ್ನು ಪರಿಚಯಿಸಿದರು. ಇವರು ಜಾತಿ ವ್ಯವಸ್ಥೆಯ ಬಗ್ಗೆ ಅಧ್ಯಯನ ನಡೆಸಿ ಅದರ ವಿನಾಶಕ್ಕೆ ಹೋರಾಟಗಳನ್ನು ರೂಪಿಸಿದರು.

• ಅಸ್ಪøಶ್ಯರು ಕನಿಷ್ಟ ಮಟ್ಟದ ಅವಕಾಶಗಳಿಂದ ವಂಚಿತರಾಗಿರುವುದನ್ನು ನಿರೂಪಿಸಲು ‘ಮಹದ್’ ಮತ್ತು ‘ಕಾಲಾರಾಂ’ ದೇವಾಲಯ ಚಳುವಳಿಗಳನ್ನು ರೂಪಿಸಿದರು. ಇವರು ಮೂರೂ ದುಂಡು ಮೇಜಿನ ಪರಿಷತ್ತಿನ ಸಮಾವೇಶಗಳಲ್ಲಿ ಭಾಗವಹಿಸಿ ಅಮೂಲ್ಯವಾದಂತಹ ಸಲಹೆ ಸೂಚನೆಗಳನ್ನು ನೀಡಿದರು.

 ಹರಿಜನೋದ್ಧಾರ ಮತ್ತು ಅಸ್ಪøಶ್ಯರ ಮುಖಂಡತ್ವಕ್ಕೆ ಸಂಬಂಧಿಸಿದಂತೆ ಗಾಂಧೀಜಿ ಮತ್ತು ಅಂಬೇಡ್ಕರ್ರಲ್ಲಿ ಭಿನ್ನಾಭಿಪ್ರಾಯಗಳು ಮೂಡಿದವು. ಅಸ್ಪøಶ್ಯರ ರಕ್ಷಣೆಗಾಗಿ ಪ್ರತ್ಯೇಕ ಮತಕ್ಷೇತ್ರಗಳನ್ನು ಬಯಸಿದ್ದು ಗಾಂಧಿ ಮತ್ತು ಅಂಬೇಡ್ಕರರ ನಡುವೆ ವಿವಾದಕ್ಕೂ ಕಾರಣವಾಯಿತು.

ಇವರು ಬರೋಡ ಮಹಾರಾಜರಡಿಯಲ್ಲಿ ದಿವಾನರಾಗಿದ್ದರು. ಮುಂಬೈ ಲೆಜಿಸ್ಲೇಟಿವ್ ಕೌನ್ಸಿಲ್ ಮತ್ತು ನಂತರದಲ್ಲಿ ವೈಸ್ರಾಯ್ ಎಕ್ಸಿಕ್ಯೂಟಿವ್ ಕೌನ್ಸಿಲ್ನಲ್ಲೂ ಸಹ ಅತ್ಯಂತ ಮುತುವರ್ಜಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಕಾರ್ಯಭಾರವನ್ನು ನಿಭಾಯಿಸಿದರು.

 ಅಂಬೇಡ್ಕರ್ ಕಾಂಗ್ರೆಸ್ ಪಕ್ಷವನ್ನು ಸೇರದೆ ‘ಬಹಿಷ್ಕøತ ಹಿತಕಾರಣಿ ಸಭಾ’ ಎಂಬ ಸಂಘಟನೆಯನ್ನು ಹಾಗೂ ‘ಸ್ವತಂತ್ರ ಕಾರ್ಮಿಕ ಪಕ್ಷ’ ಎಂಬ ಸ್ವತಂತ್ರ ಪಕ್ಷವನ್ನು ಸ್ಥಾಪಿಸಿದರು. ‘ಪ್ರಭುದ್ಧ ಭಾರತ’, ‘ಜನತಾ’, ‘ಮೂಕನಾಯಕ’, ‘ಬಹಿಷ್ಕøತ ಭಾರತ’ ಪತ್ರಿಕೆಗಳನ್ನು ಹೊರಡಿಸಿದರು.

 ಕಮ್ಯುನಿಸ್ಟ್ ಮತ್ತು ಸಮಾಜವಾದಿ ಧೋರಣೆಗಳಿಂದ ದೂರವೇ ಉಳಿದು ಕೃಷಿ ಕಾರ್ಮಿಕರ ಏಳಿಗೆಗಾಗಿಯೂ ಇವರು ದುಡಿದರು.
 
ಸ್ವತಂತ್ರಭಾರತದ ದಿಕ್ಸೂಚಿಯಾಗಿ ಭಾರತದ ಸಂವಿಧಾನವನ್ನು ರಚಿಸಬೇಕಾಯಿತು. ಸಂವಿಧಾನ ಸಭೆಯ ಅಧ್ಯಕ್ಷರಾಗಿ ಡಾ. ಬಾಬು ರಾಜೇಂದ್ರ ಪ್ರಸಾದ್ರವರನ್ನು ಆಯ್ಕೆ ಮಾಡಲಾಯಿತು.

ಮುಂದುವರೆದು ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರನ್ನಾಗಿ ಡಾ. ಬಿ.ಆರ್.ಅಂಬೇಡ್ಕರ್ರವರನ್ನು ಸಂವಿಧಾನ ರಚನಾ ಸಮಿತಿಯು ಸರ್ವಾನುಮತದಿಂದ ಆಯ್ಕೆ ಮಾಡಿತು.

 ಸಂವಿಧಾನದಲ್ಲಿ ಸಮಾನತೆಯನ್ನು ಪ್ರತಿಪಾದಿಸಿ ಅಸ್ಪøಶ್ಯತಾ ಆಚರಣೆಯ ವಿರುದ್ಧ ಕಾನೂನಿನ ರಕ್ಷಣೆಯನ್ನು ಒದಗಿಸಿದರು. ಅಸ್ಪøಶ್ಯತಾ ಆಚರಣೆಯನ್ನು ಅಪರಾಧವೆಂದು ಭಾರತದ ಸಂವಿಧಾನವು ಪರಿಗಣಿಸಿದೆ. ಸ್ವತಂತ್ರ ಭಾರತದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ರವರು ಕಾನೂನು ಮಂತ್ರಿಯಾದರು.

 ಆಧುನಿಕತೆ, ವೈಚಾರಿಕತೆ ಮತ್ತು ಪಾಶ್ಚಾತ್ಯ ವಿದ್ವಾಂಸರಿಂದ ಪ್ರೇರಣೆ ಪಡೆದರೂ ದೇಶೀಯ ಬೇರುಗಳ ಕಡೆಗೆ ಒಲವನ್ನು ತೋರಿದರು. ಜಾತಿ ವ್ಯವಸ್ಥೆಯಿಂದ ಬೇಸತ್ತ ಇವರು ಹಿಂದೂ ಧರ್ಮವನ್ನು ತೊರೆದು ಭಾರತೀಯ ಸಂಸ್ಕøತಿಯ ಭಾಗವಾಗಿದ್ದ ಬೌದ್ಧ ಧರ್ಮವನ್ನು ಸ್ವೀಕರಿಸಿದರು.

 ಮಾಕ್ರ್ಸ್ವಾದವು ಯಾವ ಬದಲಾವಣೆಯನ್ನು ರಕ್ತ ಮತ್ತು ಹಿಂಸೆಯಿಂದ ತರಬಹುದೋ ಅದನ್ನು ಬೌದ್ಧ ಧರ್ಮವು ಶಾಂತಿ ಮತ್ತು ಅಹಿಂಸಾತ್ಮಕವಾಗಿ ತರಬಲ್ಲದು ಎಂದು ಅವರು ನಂಬಿದ್ದರು.

 ಅವರ ಜೀವಮಾನದ ಸಾಧನೆಗಾಗಿ ಭಾರತ ಸರ್ಕಾರವು ಇವರಿಗೆ ಮರಣೋತ್ತರವಾಗಿ ‘ಭಾರತರತ್ನ’ವನ್ನು ನೀಡಿ ಗೌರವಿಸಿದೆ.

ಜವಾಹರಲಾಲ್ ನೆಹರು

 ಪಂಡಿತ್ ಜವಾಹರಲಾಲ್ ನೆಹರುರವರು ಹೋಂರೂಲ್ ಚಳುವಳಿಯೊಂದಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರವೇಶಿಸಿದರು. 1920ರಲ್ಲಿ ನಡೆದ ಅಸಹಕಾರ ಚಳುವಳಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ನೆಹರುರವರು 1929ರಲ್ಲಿ ಲಾಹೋರ್ ಅಧಿವೇಶನದ ಅಧ್ಯಕ್ಷರಾಗಿದ್ದರು.

 ಈ ಅಧಿವೇಶನದಲ್ಲಿ ಸಂಪೂರ್ಣ ಸ್ವರಾಜ್ಯದ ಗುರಿಯನ್ನು ಘೋಷಿಸಲಾಯಿತು. ಗಾಂಧೀಜಿಯವರು ಅಸಹಕಾರ ಚಳುವಳಿಯನ್ನು ಹಿಂದೆ ಪಡೆದದ್ದರಿಂದ ನೆಹರುರವರು ನಿರಾಶೆಯನ್ನು ವ್ಯಕ್ತಪಡಿಸಿದ್ದರು. ನೆಹರುರವರ ಚಿಂತನೆಗಳು ರಾಜಕೀಯ ಚಟುವಟಿಕೆಗಳಿಗೆ ಹೊಸ ತಿರುವನ್ನು ನೀಡಿದವು.

 ಈ ಮಹಾನ್ ನಾಯಕರು ಕಮ್ಯೂನಿಸ್ಟರ ಸಿದ್ಧಾಂತಗಳಿಂದ ಪ್ರಭಾವ ಹೊಂದಿದ್ದರು. ಪರಿಣಾಮವಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನಲ್ಲಿ ಎಡಪಂಥೀಯ ಆಶಯಗಳು ಪ್ರಬಲವಾದವು.

 ಇದರ ಫಲವಾಗಿ ನೆಹರು ಮತ್ತು ಸುಭಾಷ್ ಚಂದ್ರ ಬೋಸರು ಕಾಂಗ್ರೆಸ್ ಸಮಾಜವಾದಿ ಪಕ್ಷವನ್ನು ಸ್ಥಾಪಿಸಿದರು. ನೆಹರು ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ 49ನೆಯ ಅಧಿವೇಶನದ ಅಧ್ಯಕ್ಷರಾಗಿದ್ದರು. ಕಾಂಗ್ರೆಸ್ ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿದ್ದ ಸಾಮ್ರಾಜ್ಯಶಾಹಿ ಯುದ್ಧದಿಂದ ದೂರವೇ ಉಳಿಯಬೇಕು ಎಂದು ಸಾರಿದರು.

 ‘ಚರಕ’ ಮತ್ತು ‘ಹರಿಜನ’ ಚಳುವಳಿಗಳು ಅಷ್ಟೇನು ಪರಿಣಾಮಕಾರಿಯಲ್ಲವೆಂದು ಇವರು ವಾದಿಸಿದರು. ಈ ಅಧಿವೇಶನದಲ್ಲಿ ಗಾಂಧೀಜಿಯವರ ಚಿಂತನೆಗಳಿಂದ ದೂರ ಸರಿದಂತೆ ಇವರು ಕಂಡು ಬಂದರು.

 50ನೆಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ನೆಹರುರವರು ತಮ್ಮ ಸಮಾಜವಾದಿ ಹಾಗೂ ಕಮ್ಯುನಿಸ್ಟ್ ವಿಚಾರಗಳ ಬಗ್ಗೆ ಮೃದು ದೋರಣೆಯನ್ನು ತಳೆದರು.

‘ಕಾಂಗ್ರೆಸ್ ಇಂದು ಭಾರತದಲ್ಲಿ ಪೂರ್ಣ ಪ್ರಜಾಪ್ರಭುತ್ವಕ್ಕಾಗಿ ನಿಂತಿದೆ ಹಾಗೂ ಪ್ರಜಾಪ್ರಭುತ್ವಕ್ಕಾಗಿಯೇ ಹೋರಾಡುತ್ತದೆಯೇ ಹೊರತು ಸಮಾಜವಾದಕ್ಕಲ್ಲ’ ಎಂದರು.

 ಕೈಗಾರೀಕರಣ ಮತ್ತು ನವಭಾರತದ ಶಿಲ್ಪಿಯಾಗಿ ಭಾರತದ ಮೊದಲ ಪ್ರಧಾನ ಮಂತ್ರಿಯಾಗಿದ್ದ ನೆಹರುರವರನ್ನು ನಾವು ಕಾಣುತ್ತೇವೆ. ‘ಉಕ್ಕಿನ ಮನುಷ್ಯ’ ಎಂದು ಖ್ಯಾತಿಯಾಗಿದ್ದ ಭಾರತದ ಮೊದಲ ಗೃಹಮಂತ್ರಿಗಳಾಗಿದ್ದ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ನೇತೃತ್ವದಲ್ಲಿ ಭಾರತದ ಅನೇಕ ದೇಶೀ ಸಂಸ್ಥಾನಗಳ ವಿಲೀನಿಕರಣಕ್ಕೆ ನೆಹರು ಅವರು ಕಾರಣರಾದರು.

ನಂತರ ಭಾಷಾವಾರು ಪ್ರಾಂತ್ಯಗಳ ರಚನೆಯ ಮೂಲಕ ಭಾರತಕ್ಕೆ ಪ್ರಜಾಪ್ರಭುತ್ವೀಯ ತಳಹದಿಯನ್ನು ಹಾಕಿದರು. ಬಂಡವಾಳ ಹಾಗೂ ಸಮಾಜವಾದಿ ತತ್ವಗಳನ್ನೊಳಗೊಂಡ ಮಿಶ್ರ ಆರ್ಥಿಕ ನೀತಿಯು ನೆಹರು ಅವರ ಆಧುನಿಕ ಭಾರತದ ಮೈಲಿಗಲ್ಲಾಯಿತು.

ಬೃಹತ್ ಕೈಗಾರೀಕರಣದಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದು ಅವರು ಬಲವಾಗಿ ನಂಬಿದ್ದರು. ಸ್ವಾತಂತ್ರ್ಯ ನಂತರ ಪಂಚವಾರ್ಷಿಕ ಯೋಜನೆಗಳ ಮೂಲಕ ದೇಶದ ಅಭಿವೃದ್ಧಿಯ ಕನಸನ್ನು ಕಂಡರು.

 ಇವುಗಳ ರೂವಾರಿಯಾಗಿ ನಾವು ನೆಹರುರವರನ್ನು ಕಾಣಬಹುದು. ವಿದೇಶಾಂಗ ನೀತಿಗೆ ಸಂಬಂಧಿಸಿದಂತೆ ಭಾರತವು ಬಣಗಳ ದೃವೀಕೃತ ವ್ಯವಸ್ಥೆಯಿಂದ ವಿಮುಕ್ತಗೊಂಡು ಅಲಿಪ್ತ ನೀತಿಯನ್ನು ಪ್ರತಿಪಾದಿಸಿತು.

 ಪಂಚಶೀಲ ತತ್ವಗಳ ಆಧಾರದ ಮೇಲೆ ಶಕ್ತಿ ರಾಜಕಾರಣದಿಂದ ದೂರವೇ ಉಳಿದು ಶಾಂತಿ ಸಹಬಾಳ್ವೆಯ ಸೂತ್ರಗಳನ್ನು ಅನುಷ್ಠಾನಕ್ಕೆ ತರಲು ಕಾರಣರಾದರು. 1964ರಲ್ಲಿ ಇವರು ನಿಧನ ಹೊಂದಿದರು.

ಮಹಮದ್ ಅಲಿ ಜಿನ್ನಾ

 ಮಹಮದ್ ಅಲಿ ಜಿನ್ನಾರವರು 1906ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದರು ಹಾಗೂ ದಾದಾಬಾಯಿ ನವರೋಜಿಯವರ ಖಾಸಗಿ ಕಾರ್ಯದರ್ಶಿಯಾಗಿಯೂ ಕೆಲಸವನ್ನು ನಿರ್ವಹಿಸಿದ್ದರು.

 ತಿಲಕರ ವಿರುದ್ಧದ ಮೊಕದ್ದಮೆಗಳ ಸಂದರ್ಭದಲ್ಲಿ ಅವರ ಪರವಹಿಸಿದ್ದರಿಂದ, ಇದು ಜಿನ್ನಾರವರಿಗೆ ಅತೀವ ಪ್ರಶಂಸೆಯನ್ನು ತಂದುಕೊಟ್ಟಿತು. ಇವರು ಹೋಂ ರೂಲ್ ಲೀಗ್ನ್ನು ಸೇರಿದರು.

1916ರ ಅನೇಕ ಸಮಾವೇಶಗಳಲ್ಲಿ ಹಿಂದೂ ಮತ್ತು ಮಹಮದೀಯರ ನಡುವಿನ ಏಕತೆಯ ಅಗತ್ಯವನ್ನು ತಿಳಿಸಿದರು. ಮುಸ್ಲಿಂ ಪರ ರಾಜಕಾರಣಿ ಎಂದು ಬಿಂಬಿತವಾಗಿದ್ದರಿಂದ ಬ್ರಿಟಿಷರ ಬಳುವಳಿಯನ್ನು ಜಿನ್ನಾ ಅವರು ವಿರೋಧಿಸಿದರು.

 ರೌಲತ್ ಕಾಯ್ದೆಯನ್ನು ವಿರೋಧಿಸಿ ಅವರು ತಮ್ಮ ಕೇಂದ್ರಿಯ ಶಾಸನ ಸಲಹಾ ಸಮಿತಿಗೆ ರಾಜೀನಾಮೆಯನ್ನಿತ್ತರು. ದುಂಡು ಮೇಜಿನ ಸಮಿತಿಗಳಲ್ಲಿ ಜಿನ್ನಾ ತಾನೊಬ್ಬ ರಾಷ್ಟ್ರೀಯವಾದಿ ಮುಸಲ್ಮಾನನೆಂದು ಘೋಷಿಸಿಕೊಂಡರು.

1937ರ ಚುನಾವಣೆಯ ನಂತರ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಸಮ್ಮಿಶ್ರ ಸರ್ಕಾರವನ್ನು ರೂಪಿಸಲು ವಿಫಲವಾದಾಗ ಜಿನ್ನ ತನ್ನ ಕಾರ್ಯತಂತ್ರವನ್ನು ಬದಲಾಯಿಸಿಕೊಂಡರು.

 ಬ್ರಿಟಿಷರು ಸ್ವಾತಂತ್ರ್ಯ ನೀಡುವ ಸಂದರ್ಭ ಹತ್ತಿರವಾದಂತೆ ಜಿನ್ನಾರವರು ಪಾಕಿಸ್ತಾನದ ಬೇಡಿಕೆಯನ್ನು ವಿವಿಧ ರೀತಿಯಲ್ಲಿ ತೀವ್ರಗೊಳಿಸಿದರು.

 ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯುವ ಸಮಯದಲ್ಲಿ ದೇಶವನ್ನು ವಿಭಜಿಸಿ ಪಾಕಿಸ್ತಾನವನ್ನು ಪಡೆದರು.

ಭಾರತದ ವಿಭಜನೆ

ಸ್ವಾತಂತ್ರ್ಯ ಚಳುವಳಿಯ ಉದ್ದಕ್ಕೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಖಂಡ ರಾಷ್ಟ್ರದ ಕಲ್ಪನೆಯನ್ನು ಹೊಂದಿದ್ದು. ಆದರೆ ಮಹಮದ್ ಅಲಿ ಜಿನ್ನಾ ಅವರು ಮುಸ್ಲಿಮರಿಗೆ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಮಂಡಿಸುತ್ತಲೇ ಇದ್ದರು.

 1940ರಲ್ಲಿ ನಡೆದ ಮುಸ್ಲಿಂ ಲೀಗ್ನ ಲಾಹೋರ್ ಅಧಿವೇಶನದಲ್ಲಿ ಜಿನ್ನಾ ಹಿಂದೂ ಮತ್ತು ಮುಸ್ಲಿಮರು ಒಂದು ದೇಶವಾಗಲು ಸಾಧ್ಯವೇ ಇಲ್ಲ ಎಂದು ಘೋಷಿಸಿದರು. ಎರಡನೆಯ ಮಹಾಯುದ್ಧ ಮುಗಿದು ಬ್ರಿಟನ್ನಲ್ಲಿ ಲೇಬರ್ ಪಕ್ಷ ಅಧಿಕಾರಕ್ಕೆ ಬಂದಿತು.

 ಇದು ಭಾರತದಲ್ಲಿನ ರಾಜಕೀಯ ಬಿಕ್ಕಟ್ಟನ್ನು ಶಮನಗೊಳಿಸಲು ಕ್ರಮ ಕೈಗೊಂಡಿತು. ಇದು ಕ್ಯಾಬಿನೆಟ್ ನಿಯೋಗವನ್ನು ಭಾರತಕ್ಕೆ ಸ್ವಯಂ ಅಧಿಕಾರವನ್ನು ನೀಡುವ ಕುರಿತು ಚರ್ಚಿಸಲು ಕಳುಹಿಸಿತು.

 ಈ ನಿಯೋಗವು ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ನೊಂದಿಗೆ ಚರ್ಚಿಸಿತು. ಭಾರತಕ್ಕೆ ಫೆಡರಲ್ ಮಾದರಿ ಸರ್ಕಾರವನ್ನು ಸೂಚಿಸಿತು. ಸಂವಿಧಾನ ರಚನಾ ಸಭೆ ಕರೆಯುವುದಾಗಿ ಮತ್ತು ಮಧ್ಯಂತರ ರಾಷ್ಟ್ರೀಯ ಸರ್ಕಾರವನ್ನು ಸ್ಥಾಪಿಸಲು ಶಿಫಾರಸ್ಸು ಮಾಡಿತು.

 ಆದರೆ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ನಡುವೆ ಮಧ್ಯಂತರ ಸರ್ಕಾರ ರಚಿಸುವ ವಿಚಾರದಲ್ಲಿ ಭಿನ್ನತೆ ಉಂಟಾಯಿತು. ಮುಸ್ಲಿಮರಿಗಾಗಿ ಪ್ರತ್ಯೇಕ ರಾಷ್ಟ್ರಕ್ಕಾಗಿ 1946ರ ಆಗಸ್ಟ್ 16 ರಂದು ನೇರ ಕಾರ್ಯಾಚರಣೆ ದಿನಕ್ಕೆ (Direct Action Day) ಕರೆ ನೀಡಿತು. ಇದರಿಂದ ದೇಶಾದ್ಯಂತ ಕೋಮುಗಲಭೆಗಳು ನಡೆದವು.

 ಡಾ. ಬಾಬು ರಾಜೇಂದ್ರ ಪ್ರಸಾದ್ ಅಧ್ಯಕ್ಷತೆಯಲ್ಲಿ ಸೇರಿದ ಸಂವಿಧಾನ ಸಭೆಯಲ್ಲಿ ಮುಸ್ಲಿಂ ಲೀಗ್ ಭಾಗವಹಿಸಲಿಲ್ಲ.

ಕಾಂಗ್ರೆಸ್ ಮತ್ತು ಮುಸ್ಲಿಮ್ ಲೀಗ್ ಸಂಬಂಧ ತೀರ ಹದಗೆಟ್ಟಿತ್ತು. ಈ ಸಮಯದಲ್ಲಿ ಬ್ರಿಟಿಷ್ ಸರ್ಕಾರ ಶೀಘ್ರವಾಗಿ ಅಧಿಕಾರವನ್ನು ಹಸ್ತಾಂತರಿಸುವುದಾಗಿ ತಿಳಿಸಿ, 1946ರ ಮಾರ್ಚ್ನಲ್ಲಿ ಲಾರ್ಡ್ ಮೌಂಟ್ ಬ್ಯಾಟನ್ ಅವರನ್ನು ಭಾರತಕ್ಕೆ ವೈಸ್ರಾಯ್ ಆಗಿ ಕಳುಹಿಸಿತು.

 ಬ್ಯಾಟನ್ರವರು ಗಾಂಧೀಜಿ, ಜಿನ್ನಾ ಮತ್ತಿತರ ನಾಯಕರೊಂದಿಗೆ ಮಾತುಕತೆ ನಡೆಸಿ ಭಾರತವನ್ನು ವಿಭಜಿಸುವ ಯೋಜನೆಯನ್ನು ರೂಪಿಸಿದರು. 1947ರ ಜುಲೈನಲ್ಲಿ ಭಾರತ ಸ್ವಾತಂತ್ರ್ಯ ಮಸೂದೆಯು ಕಾಯ್ದೆಯ ರೂಪವನ್ನು ಪಡೆಯಿತು.

 ಕಾಯ್ದೆಯನ್ವಯ 1947ರ ಆಗಸ್ಟ್ 15ರಂದು ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ಪ್ರತ್ಯೇಕ ರಾಷ್ಟ್ರಗಳು ಉದಯಿಸಿದವು. ರ್ಯಾಡ್ ಕ್ಲಿಪ್ ಆಯೋಗವು ಈ ದೇಶಗಳ ಗಡಿಗಳನ್ನು ಗುರುತಿಸಿತು.

 ಪಂಡಿತ್ ಜವಾಹರಲಾಲ್ ನೆಹರುರವರು ಭಾರತದ ಪ್ರಥಮ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ವನ್ನು ಸ್ವೀಕರಿಸಿದರು. 1948ರ ಜನವರಿ 30ರಂದು ಪ್ರಾರ್ಥನಾ ಸಭೆಗೆ ನಡೆದು ಹೋಗುತ್ತಿದ್ದ ಹಿಂದೂ ಮುಸ್ಲಿಂ ಭಾವೈಕ್ಯತೆಯ ಹರಿಕಾರ ಗಾಂಧೀಜಿಯವರನ್ನು ನಾಥೋರಾಮ್ ಗೂಡ್ಸೆ ಎಂಬುವವನು ಹತ್ಯೆ ಮಾಡಿದನು
logoblog

Thanks for reading About the freedom struggle

Previous
« Prev Post

No comments:

Post a Comment